HEALTH TIPS

ಗಾಝಾಕ್ಕೆ ಮೂಲಭೂತ ಅಗತ್ಯಗಳನ್ನು ಇಸ್ರೇಲ್ ಒದಗಿಸಬೇಕು : ಐಸಿಜೆ ಸೂಚನೆ

ಹೇಗ್: ಗಾಝಾಕ್ಕೆ ಸಹಾಯ ಒದಗಿಸುವ ಮಾರ್ಗವನ್ನು ಸರಾಗಗೊಳಿಸಲು ಇಸ್ರೇಲ್ ಬದ್ಧವಾಗಿದೆ. ಫೆಲೆಸ್ತೀನಿಯರಿಗೆ ಬದುಕಲು `ಮೂಲಭೂತ ಅಗತ್ಯ'ಗಳನ್ನು ಇಸ್ರೇಲ್ ಒದಗಿಸಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಒತ್ತಿಹೇಳಿದೆ.

ವಿಶ್ವಸಂಸ್ಥೆ ಮತ್ತು ಯುಎನ್‍ಆರ್‌ಡಬ್ಲ್ಯೂಎ ಸೇರಿದಂತೆ ಅದರ ಘಟಕಗಳು ಒದಗಿಸುವ ಪರಿಹಾರ ಯೋಜನೆಗಳನ್ನು ಒಪ್ಪಿಕೊಳ್ಳುವ ಮತ್ತು ಸುಗಮಗೊಳಿಸುವ ಬಾಧ್ಯತೆಯನ್ನು ಇಸ್ರೇಲ್ ಹೊಂದಿದೆ ಎಂದು ಐಸಿಜೆ ಅಧ್ಯಕ್ಷ ಯೂಜಿ ಇವಾಸವಾ ಹೇಳಿದ್ದಾರೆ.

ಫೆಲೆಸ್ತೀನಿಯನ್ ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆ ಏಜೆನ್ಸಿಯನ್ನು ಇಸ್ರೇಲ್ ನಿಷೇಧಿಸಿದ್ದು ಏಜೆನ್ಸಿಯ ಕೆಲ ಸಿಬ್ಬಂದಿಗಳು 2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಆರೋಪಿಸಿದೆ. ಆದರೆ ಆರೋಪಗಳಿಗೆ ಇಸ್ರೇಲ್ ಸಮರ್ಥನೆ ನೀಡಿಲ್ಲ ಎಂದು ಐಸಿಜೆ ಹೇಳಿದೆ.

ಇಸ್ರೇಲ್ ಆಕ್ರಮಿತ ಶಕ್ತಿಯಾಗಿ(ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಶಕ್ತಿಯಾಗಿ) ಸ್ಥಳೀಯ ಜನಸಂಖ್ಯೆಯ ಮೂಲಭೂತ ಅಗತ್ಯಗಳನ್ನು ಖಚಿತಪಡಿಸಿಕೊಳ್ಳುವ ಬಾಧ್ಯತೆಯನ್ನು ಹೊಂದಿದೆ. ಜೊತೆಗೆ, ಈ ಸರಬರಾಜುಗಳ ಪೂರೈಕೆಗೆ ಅಡ್ಡಿಯಾಗದಿರುವ ಹೊಣೆಗಾರಿಕೆಯನ್ನೂ ಹೊಂದಿದೆ. ಉಪವಾಸ ಬೀಳಿಸುವುದು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಯುದ್ಧದ ವಿಧಾನವಾಗಿರುವುದಿಲ್ಲ ಎಂದು ಐಸಿಜೆ ಹೇಳಿದೆ.

ಐಸಿಜೆಯ `ಸಲಹಾ ಅಭಿಪ್ರಾಯಗಳು' ಕಾನೂನುಬದ್ಧ ಬಾಧ್ಯತೆಯಾಗಿರುವುದಿಲ್ಲ. ಆದರೆ ಇದು ಕಾನೂನಿನ ತೂಕ ಮತ್ತು ನೈತಿಕ ಅಧಿಕಾರವನ್ನು ಹೊಂದಿದೆ ಎಂದು ಐಸಿಜೆ ವಿಶ್ಲೇಷಿಸಿದೆ. ನ್ಯಾಯಾಲಯದ ಕಲಾಪದಲ್ಲಿ ಇಸ್ರೇಲ್ ಪಾಲ್ಗೊಂಡಿಲ್ಲ. ಆಕ್ರಮಿತ ಶಕ್ತಿಯಾಗಿ ವಿಶ್ವಸಂಸ್ಥೆ ಹಾಗೂ ಇತರ ಸಂಸ್ಥೆಗಳ ಕಡೆಗೆ (ಫೆಲೆಸ್ತೀನೀಯರ ಉಳಿವಿಗೆ ಅಗತ್ಯವಿರುವ ಸರಬರಾಜುಗಳನ್ನು ಅಡೆತಡೆಯಿಲ್ಲದೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ) ಇಸ್ರೇಲ್‍ನ ಬಾಧ್ಯತೆಗಳನ್ನು ಸ್ಪಷ್ಟಪಡಿಸುವಂತೆ ವಿಶ್ವಸಂಸ್ಥೆಯು ಐಸಿಜೆಯನ್ನು ಕೋರಿತ್ತು. ಈ ಹಿನ್ನೆಲೆಯಲ್ಲಿ ಐಸಿಜೆ ಹಲವಾರು ರಾಷ್ಟ್ರಗಳಿಂದ ಹಾಗೂ ಸಂಸ್ಥೆಗಳಿಂದ ಪುರಾವೆಗಳನ್ನು ಸಂಗ್ರಹಿಸಿದೆ.

ಐಸಿಜೆ ಕಲಾಪದಲ್ಲಿ ಮಾತನಾಡಿದ ಅಮೆರಿಕಾದ ಪ್ರತಿನಿಧಿ ಜೋಷ್ ಸಿಮನ್ಸ್ ಯುಎನ್‍ಆರ್‌ಡಬ್ಸ್ಯೂಎ ಪಕ್ಷಪಾತ ತೋರುತ್ತಿದೆ ಮತ್ತು ಏಜೆನ್ಸಿಯ ವ್ಯವಸ್ಥೆಗಳನ್ನು ಹಮಾಸ್ ಬಳಸುತ್ತಿದೆ ಎಂದು ಆರೋಪಿಸಿದರು. ನಿರ್ದಿಷ್ಟವಾಗಿ ಯುಎನ್‍ಆರ್‌ಡಬ್ಸ್ಯೂಎಗೆ ಮಾತ್ರ ಮಾನವೀಯ ನೆರವು ಒದಗಿಸಲು ಅನುಮತಿಸಬೇಕೆಂಬ ಬಾಧ್ಯತೆಯನ್ನು ಇಸ್ರೇಲ್ ಹೊಂದಿಲ್ಲ. ಗಾಝಾಕ್ಕೆ ನೆರವು ಒದಗಿಸಲು ಯುಎನ್‍ಆರ್‍ಡಬ್ಲ್ಯೂಎ ಏಕೈಕ ಆಯ್ಕೆಯಲ್ಲ. ಇತರ ಆಯ್ಕೆಗಳೂ ಇವೆ ಎಂದು ಅಮೆರಿಕದ ಪ್ರತಿನಿಧಿ ವಾದ ಮಂಡಿಸಿದರು.

ಇಸ್ರೇಲ್ ಐಸಿಜೆಯ ಸಲಹಾ ಸೂಚನೆಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಎಂದು ಇಸ್ರೇಲ್‍ನ ವಿದೇಶಾಂಗ ಇಲಾಖೆಯ ವಕ್ತಾರ ಒರೆನ್ ಮರ್ಮೋಸ್ಟೀನ್ ಹೇಳಿದ್ದಾರೆ. `ಇಸ್ರೇಲ್‍ನ ವಿರುದ್ಧ ಅಂತರಾಷ್ಟ್ರೀಯ ಕಾನೂನಿನ ನೆಪದಲ್ಲಿ ರಾಜಕೀಯ ಕ್ರಮಗಳನ್ನು ಹೇರುವ ಮತ್ತೊಂದು ರಾಜಕೀಯ ಪ್ರಯತ್ನವಾಗಿದೆ' ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಗಾಝಾ ಆರೋಗ್ಯ ಬಿಕ್ಕಟ್ಟು ತಲೆಮಾರುಗಳವರೆಗೆ ಇರಲಿದೆ : ವಿಶ್ವ ಆರೋಗ್ಯ ಸಂಸ್ಥೆ

ಗಾಝಾದಲ್ಲಿ ರೋಗ, ಗಾಯಗಳು ಮತ್ತು ಕ್ಷಾಮದ ಮಾರಕ ಸಂಯೋಜನೆಯು ಪೀಳಿಗೆಯ ಬಿಕ್ಕಟ್ಟಾಗಿದ್ದು ತಲೆಮಾರುಗಳವರೆಗೆ ಇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಗಾಝಾ ಪಟ್ಟಿಯ ಜನಸಂಖ್ಯೆಯ ಸಂಕೀರ್ಣ ಅಗತ್ಯಗಳನ್ನು ಪರಿಹರಿಸಲು ಸಹಾಯದಲ್ಲಿ ಭಾರೀ ಹೆಚ್ಚಳದ ಅಗತ್ಯವಿದೆ. ಗಾಝಾವು ಬರಗಾಲ, ಅಗಾಧ ಪ್ರಮಾಣದ ಗಾಯಗಳು, ಕುಸಿದುಬಿದ್ದಿರುವ ಆರೋಗ್ಯ ವ್ಯವಸ್ಥೆ ಹಾಗೂ ನೀರು ಮತ್ತು ನೈರ್ಮಲ್ಯ ಮೂಲಸೌಕರ್ಯಗಳ ನಾಶದಿಂದಾಗಿ ರೋಗಗಳ ಉಲ್ಪಣದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಕಳವಳ ವ್ಯಕ್ತಪಡಿಸಿದ್ದಾರೆ. ನೆರವನ್ನು ಆಯುಧವನ್ನಾಗಿಸಬಾರದು. ನೆರವು ಪೂರೈಕೆ ಇಸ್ರೇಲ್ ಷರತ್ತನ್ನು ವಿಧಿಸಬಾರದು ಎಂದವರು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries