ರಾಷ್ಟ್ರಪತಿ ಮುರ್ಮು ಅವರು ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ಸುಮಾರು 200 ಕಿಮೀ ದೂರ ಕ್ರಮಿಸಿದರು. ಈ ವೇಳೆ ವಿಮಾನವು ಸಮುದ್ರ ಮಟ್ಟದಿಂದ 15,000 ಅಡಿ ಎತ್ತರದಲ್ಲಿ ಮತ್ತು ಗಂಟೆಗೆ 700 ಕಿಮೀ ವೇಗದಲ್ಲಿ ಹಾರಾಟ ಮಾಡಿತು. ಈ ರಫೇಲ್ ವಿಮಾನವನ್ನು 17 ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಅಮಿತ್ ಗೆಹಾನಿ ಹಾರಿಸಿದರು.
ಭಾರತದ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು ಈ ಮೂಲಕ ರಫೇಲ್ ಮತ್ತು ಸುಖೋಯ್ ಎರಡೂ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಗೌರವಕ್ಕೇರಿದ್ದಾರೆ. ಅವರು 2023ರಲ್ಲಿ ಸುಖೋಯ್-30 ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದ್ದರು.
ಹಾರಾಟದ ನಂತರ ಅಂಬಾಲಾ ವಾಯುಪಡೆ ನಿಲ್ದಾಣದ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ರಾಷ್ಟ್ರಪತಿ ಮುರ್ಮು , ಭಾರತೀಯ ವಾಯುಪಡೆಯ ರಫೇಲ್ ವಿಮಾನದಲ್ಲಿ ನನ್ನ ಮೊದಲ ಹಾರಾಟಕ್ಕಾಗಿ ಅಂಬಾಲಾ ವಾಯುಪಡೆ ನಿಲ್ದಾಣದಲ್ಲಿರಲು ನನಗೆ ತುಂಬಾ ಸಂತೋಷವಾಗಿದೆ. ರಫೇಲ್‌ನಲ್ಲಿ ಹಾರಾಟ ನಡೆಸಿರುವುದು ಮರೆಯಲಾಗದ ಅನುಭವ. ಬಲಿಷ್ಠ ರಫೇಲ್ ವಿಮಾನದಲ್ಲಿನ ಈ ಹಾರಾಟವು ರಾಷ್ಟ್ರದ ರಕ್ಷಣಾ ಸಾಮರ್ಥ್ಯಗಳ ಬಗ್ಗೆ ಹೆಮ್ಮೆಯನ್ನು ತುಂಬಿದೆ. ಈ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ ಭಾರತೀಯ ವಾಯುಪಡೆ ಮತ್ತು ಅಂಬಾಲಾ ನಿಲ್ದಾಣದ ಸಂಪೂರ್ಣ ತಂಡಕ್ಕೆ ಅಭಿನಂದನೆಗಳು ಎಂದು ಬರೆದಿದ್ದಾರೆ.




