ಮುಂಬೈ: ₹19,650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು.
1,160 ಹೆಕ್ಟೇರ್ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಹೊಸ ವಿಮಾನ ನಿಲ್ದಾಣ ದೇಶದ ವಾಯುಯಾನ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ, ಮುಂಬೈನ ಹಾಲಿ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ.
ಉದ್ಘಾಟನೆಗೂ ಮುನ್ನ ಪ್ರಧಾನಮಂತ್ರಿಯವರು ವಿಮಾನ ನಿಲ್ದಾಣದಲ್ಲಿ ಕಲ್ಪಿಸಿರುವ ಅತ್ಯಾಧುನಿಕ ಸೌಲಭ್ಯ ವೀಕ್ಷಿಸಿದರು.
ಇದು ದೇಶದ ಅತಿದೊಡ್ಡ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಿದ್ದು, ಸಾರ್ವಜನಿಕ, ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮುಂಬೈನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿದೆ.
ಇದೇ ವೇಳೆ ಅವರು ಮುಂಬೈ ನಗರ ಸಾರಿಗೆಯಲ್ಲಿ ಮಹತ್ವದ ಮೈಲುಗಲ್ಲಾಗಲಿರುವ ಮುಂಬೈ ಮೆಟ್ರೊ ರೈಲಿನ ಮೂರನೇ ಹಂತವನ್ನು ಉದ್ಘಾಟಿಸಿದರು.

