ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲ ಹಾಗೂ ಮಾಲಿಗಪುರತ್ತಮ್ಮ ಕ್ಷೇತ್ರದಲ್ಲಿ ಮುಂದಿನ ಒಂದು ವರ್ಷ ಕಾಲಾವಧಿಗೆ ಮುಖ್ಯ ಅರ್ಚಕ(ಮೇಲ್ಶಾಂತಿ)ರನ್ನು ನೇಮಕಗೊಳಿಸಲಾಗಿದೆ. ಶ್ರೀ ಅಯ್ಯಪ್ಪ ದೇಗುಲಕ್ಕೆ ಮುಖ್ಯ ಅರ್ಚಕರಾಗಿ ತ್ರಿಶ್ಯೂರ್ ಚಾಲಕ್ಕುಡಿ ನಿವಾಸಿ ಎರನ್ನೂರ್ ಮನಯಿಲ್‍ನ ಇ.ಡಿ ಪ್ರಸಾದ್ ನಂಬೂದಿರಿ ಹಾಗೂ ಮಾಲಿಗಪುರತ್ತಮ್ಮ ಕ್ಷೇತ್ರದ ಮುಖ್ಯ ಅರ್ಚಕರಾಗಿ ಕೊಲ್ಲಂ ಜಿಲ್ಲೆಯ ಕುಟ್ಟಿಕಡ ನಿವಾಸಿ ಎಂ.ಜಿ ಮನು ನಂಬೂದಿರಿ ಅವರನ್ನು ಆಯ್ಕೆ ಮಾಡಲಾಗಿದೆ.
ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಶಬರಿಮಲೆ ದೇಗುಲದ ಮುಖ್ಯ ಅರ್ಚಕ ಸ್ಥಾನಕ್ಕಾಗಿ ಅಂತಿಮ ಪಟ್ಟಿಯಲ್ಲಿ 14ಮಂದಿಯ ಹೆಸರು ಒಳಗೊಂಡಿದ್ದು, ಚೀಟಿ ಎತ್ತುವ ಮೂಲಕ ಇ.ಡಿ ಪ್ರಸಾದ್ ಹಾಗೂ ಎಂ.ಜಿ ಮನು ನಂಬೂದಿರಿ ಅವರನ್ನು ಆಯ್ಕೆ ಮಾಡಲಾಗಿದೆ. ಇ.ಡಿ ಪ್ರಸಾದ್ ಅವರು ಪ್ರಸಕ್ತ ಅರೇಶ್ವರಂ ಶ್ರೀ ಧರ್ಮಶಾಸ್ತಾ ದೇವಸ್ಥಾನದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಶಬರಿಮಲೆ ಮುಖ್ಯ ಅರ್ಚಕಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು, ಮೂರನೇ ಬಾರಿಗೆ ಶ್ರೀ ಅಯ್ಯಪ್ಪನ ಪೂಜಾಕೈಂಕರ್ಯ ಭಾಗ್ಯ ತನ್ನ ಪಾಲಿಗೆ ಲಭಿಸಿರುವುದಾಗಿ ಇ.ಡಿ ಪ್ರಸಾದ್ ತಿಳಿಸುತ್ತಾರೆ. ಶಬರಿಮಲೆ ಕ್ಷೇತ್ರದಲ್ಲಿ ಒಂದು ವರ್ಷ ಕಾಲಾವಧಿಗೆ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸಲಿದ್ದು, ಮಂಡಲ-ಮಕರ ಸಂಕ್ರಮಣ ಕಾಲಾವಧಿಯಲ್ಲಿ ಮುಖ್ಯ ಅರ್ಚಕರಾಗಿ ನಿಯುಕ್ತಿಗೊಳ್ಳಲಿದ್ದಾರೆ.


