ವಾಷಿಂಗ್ಟನ್: ಉಕ್ರೇನ್ ವಿರುದ್ಧ ಯುದ್ಧ ಮುಂದುವರಿಸಿರುವ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಗೇ ಮಾಡದಿದ್ದರೆ, ಭಾರತವು 'ಭಾರಿ' ಸುಂಕ ಪಾವತಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಪುನರುಚ್ಚರಿಸಿದ್ದಾರೆ.
'ಏರ್ ಫೋರ್ಸ್ ಒನ್' ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಟ್ರಂಪ್, 'ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ರಷ್ಯಾದೊಂದಿಗೆ ತೈಲ ವ್ಯವಹಾರ ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ' ಎಂದು ಹೇಳಿದ್ದಾರೆ.
ಟ್ರಂಪ್ ಅವರು ಕಳೆದವಾರವೂ ಇದೇ ರೀತಿಯ ಹೇಳಿಕೆ ನೀಡಿದ್ದರು. ಆದರೆ, ಭಾರತದ ವಿದೇಶಾಂಗ ಸಚಿವಾಲಯ ಅದನ್ನು ಅಲ್ಲಗಳೆದಿತ್ತು. ಟ್ರಂಪ್ ಮತ್ತು ಮೋದಿ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದಿದ್ದ ಸಚಿವಾಲಯ, ಭಾರತದ ತೈಲ ಖರೀದಿಯು ಗ್ರಾಹಕರ ಹಿತಾಸಕ್ತಿಯನ್ನು ಆಧರಿಸಿದೆ ಎಂದು ಸ್ಪಷ್ಟಪಡಿಸಿತ್ತು.
ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ, 'ಅವರು (ಭಾರತ) ಹಾಗೆ ಹೇಳುವುದಾದರೆ, ಭಾರಿ ಪ್ರಮಾಣದ ಸುಂಕ ಪಾವತಿಸುವುದನ್ನು ಮುಂದುವರಿಸಬೇಕಾಗುತ್ತದೆ. ಹಾಗಾಗುವುದನ್ನ ಅವರು ಬಯಸುವುದಿಲ್ಲ' ಎಂದು ಪ್ರತಿಪಾದಿಸಿದ್ದಾರೆ.
ಭಾರತವು ತನಗೆ ಅಗತ್ಯವಿರುವ ಮೂರನೇ ಒಂದು ಭಾಗದಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಭಾರತವು ತೈಲ ಖರೀದಿ ನಿಲ್ಲಿಸಿದರೆ ರಷ್ಯಾಗೆ ಹಣಕಾಸು ಸಮಸ್ಯೆ ಎದುರಾಗಲಿದ್ದು, ಆ ಮೂಲಕ ಉಕ್ರೇನ್ ವಿರುದ್ಧದ ಯುದ್ಧ ಅಂತ್ಯಗೊಳಿಸಬಹುದು ಎಂಬುದು ಅಮೆರಿಕದ ಲೆಕ್ಕಾಚಾರ ಎನ್ನಲಾಗಿದೆ.

