ಸಹರಾನ್‌ಪುರ: ಆಫ್ಘಾನಿಸ್ತಾನ-ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧವು ಭವಿಷ್ಯದಲ್ಲಿ ಇನ್ನಷ್ಟು ಬಲಗೊಳ್ಳಲಿದೆ' ಎಂದು ಆಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಅಮಿರ್ ಖಾನ್ ಮುತ್ತಖಿ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಇಲ್ಲಿನ ದಾರುಲ್ ಉಲೂಮ್ ದೇವಬಂದ್ ಇಸ್ಲಾಮಿಕ್ ಶೈಕ್ಷಣಿಕ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
'ನಾವು ಭಾರತಕ್ಕೆ ಹೊಸ ರಾಯಭಾರಿ ಕಳುಹಿಸುತ್ತೇವೆ. ಭಾರತದಿಂದಲೂ ಜನರು ಕಾಬೂಲ್‌ಗೆ ಭೇಟಿ ನೀಡಬಹುದು. ಭವಿಷ್ಯದಲ್ಲಿ ಉಭಯ ದೇಶಗಳ ನಡುವಿನ ಸಂಬಂಧವು ಇನ್ನಷ್ಟು ಉತ್ತಮಗೊಳ್ಳುತ್ತದೆ' ಎಂದು ಅವರು ಹೇಳಿದರು.
ದಾರುಲ್ ಉಲೂಮ್ ದೇವಬಂದ್ ಇಸ್ಲಾಮಿಕ್ ಶೈಕ್ಷಣಿಕ ಕೇಂದ್ರದ ಕುಲಪತಿ ಅಬ್ದುಲ್ ಖಾಸಿಂ ನೊಮಾನಿ, ಜಮಿಯತ್ ಉಲಮಾ ಇ-ಹಿಂದ್ ಅಧ್ಯಕ್ಷ ಮೌಲಾನ ಅಶ್ರದ್ ಮದನಿ ಅವರು ಅಮಿರ್ ಖಾನ್ ಮುತ್ತಖಿ ಅವರನ್ನು ಸ್ವಾಗತಿಸಿದರು. ಶೈಕ್ಷಣಿಕ ಕೇಂದ್ರದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು, ಸ್ಥಳೀಯರು ಭಾಗವಹಿಸಿದ್ದರು.
ಮುತ್ತಖಿ ಭೇಟಿಯ ಹಿನ್ನೆಲೆಯಲ್ಲಿ ದಾರುಲ್ ಉಲೂಮ್ ದೇವಬಂದ್ ಇಸ್ಲಾಮಿಕ್ ಶೈಕ್ಷಣಿಕ ಕೇಂದ್ರದ ಕ್ಯಾಂಪಸ್‌ನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಚಾಬಹಾರ್ ಬಂದರು ಅಭಿವೃದ್ಧಿಗೆ ಸಂಬಂಧಿಸಿದ ಅಡೆತಡೆ ನಿವಾರಣೆಗೂ ಶ್ರಮಿಸುವುದಾಗಿ ಮುತ್ತಖಿ ಹೇಳಿದ್ದಾರೆ. ಈ ಬಂದರು, ಮಧ್ಯ ಏಷ್ಯಾ ದೇಶಗಳೊಂದಿಗೆ ಭಾರತ, ಅಫ್ಗಾನಿಸ್ತಾನ ಮತ್ತು ಇರಾನಿನ ವಾಣಿಜ್ಯ ವಹಿವಾಟು ವಿಸ್ತರಿಸುವ ಮಹಾದ್ವಾರವಾಗಿ ಬಳಕೆಗೆ ಬರಲಿದೆ.
ಮುತ್ತಖಿ ಅವರ 6 ದಿನಗಳ ಭಾರತ ಪ್ರವಾಸವು ಅ.9ರಿಂದ ಆರಂಭಗೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿ ತಾಲಿಬಾನ್ ಸರ್ಕಾರದ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿದ್ದಾರೆ.

