ನವದೆಹಲಿ: ಪ್ರಾದೇಶಿಕ ಸಂಪರ್ಕ ಯೋಜನೆಗಳ ವಿಸ್ತರಣೆಯೊಂದಿಗೆ ಭಾರತದಲ್ಲಿ ವಿಮಾನಯಾನ ಮಾರುಕಟ್ಟೆ ವೃದ್ಧಿಯಾಗುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನದ ವಾಣಿಜ್ಯ ತಯಾರಿಕೆಗಾಗಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಎಚ್‌ಎಲ್), ರಷ್ಯಾದ ಪ್ರಮುಖ ವಾಣಿಜ್ಯ ವಿಮಾನ ಉತ್ಪಾದಕ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಮಾಸ್ಕೊದ ಯುನೈಟೆಡ್ ಏರ್ ಕಾರ್ಪೊರೇಷನ್‌ನೊಂದಿಗೆ ಎಚ್‌ಎಎಲ್ ಸಂಸ್ಥೆ ಸೋಮವಾರ ಈ ಒಪ್ಪಂದಕ್ಕೆ ಸಹಿ ಹಾಕಿದೆ.
ಎಚ್‌ಎಎಲ್ ಸಿಎಂಡಿ ಡಿ.ಕೆ ಸುನೀಲ್ ಮತ್ತು ಯುಎಸಿ ಕಂಪನಿಯ ಮಹಾನಿರ್ದೇಶಕ ವಾಡಿಮ್ ಬಡೇಖಾ ಅವರ ಸಮ್ಮುಖದಲ್ಲಿ ಎಚ್‌ಎಲ್‌ನ ಪ್ರಭಾತ್ ರಂಜನ್ ಮತ್ತು ಯುಎಸಿ ಕಂಪನಿಯ ಒಲೆಗ್ ಬೊಗೊಮೊಲೊವ್ ಈ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದದ ಪ್ರಕಾರ ಎಚ್‌ಎಲ್, ದೇಶೀಯ ಗ್ರಾಹಕರಿಗಾಗಿ ಡಬ್ಬಲ್ ಎಂಜಿನ್ ಹೊಂದಿರುವ, ಸಣ್ಣ ಗಾತ್ರದ, ಎಸ್-ಜೆ 100(SJ-100) ವಿಮಾನವನ್ನು ತಯಾರಿಸಲಿದೆ. ಈಗಾಗಲೇ 200 ಕ್ಕೂ ಹೆಚ್ಚು ಎಸ್‌ಜೆ-100 ವಿಮಾನಗಳನ್ನು ತಯಾರಿಸಲಾಗಿದ್ದು, ವಿಶ್ವದ 16 ಕ್ಕೂ ಹೆಚ್ಚು ವಾಣಿಜ್ಯ ವಿಮಾನಯಾನ ಕಂಪನಿಗಳು ಇವುಗಳನ್ನು ಬಳಸುತ್ತಿವೆ.
'ಎಸ್‌ಜೆ-100 ವಿಮಾನವು, ಭಾರತದಲ್ಲಿ 'ಉಡಾನ್' ಯೋಜನೆಯಡಿಯಲ್ಲಿ ಕಡಿಮೆ ದೂರ ಸಂಪರ್ಕದಲ್ಲಿ ಗೇಮ್ ಚೇಂಜರ್ ಆಗಲಿದೆ' ಎಂದು ಎಚ್‌ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿಮಾನವು ರಷ್ಯಾದ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿದ್ದು, ಅಲ್ಲಿನ ಒಂಬತ್ತು ವಿಮಾನಯಾನ ಸಂಸ್ಥೆಗಳು ಈ ವಿಮಾನವನ್ನು ಬಳಕೆ ಮಾಡುತ್ತಿವೆ. ಇದು 103 ಆಸನಗಳ ಗರಿಷ್ಠ ಆಸನ ಸಾಮರ್ಥ್ಯವನ್ನು ಹೊಂದಿದ್ದು, 3500 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯ ರೇಂಜ್ ಹೊಂದಿದೆ.
ಮುಂದಿನ ಹತ್ತು ವರ್ಷಗಳಲ್ಲಿ, ಭಾರತೀಯ ವಾಯುಯಾನ ಕ್ಷೇತ್ರವು ಈ ಪ್ರಕಾರದಲ್ಲಿ ಪ್ರಾದೇಶಿಕ ಸಂಪರ್ಕಕ್ಕಾಗಿ 200 ಕ್ಕೂ ಹೆಚ್ಚು ಜೆಟ್‌ಗಳು ಮತ್ತು ಹಿಂದೂ ಮಹಾಸಾಗದ ವ್ಯಾಪ್ತಿಯಲ್ಲಿರುವ ಅಂತರರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರವಾಸಿ ತಾಣಗಳಿಗೆ ಸೇವೆ ಸಲ್ಲಿಸಲು ಹೆಚ್ಚುವರಿಯಾಗಿ 350 ವಿಮಾನಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ.
ವಿಮಾನಗಳ ತಯಾರಿಕೆ ಆರಂಭಕ್ಕೂ ಮೊದಲು ಸಹಿ ಮಾಡಬೇಕಾದ ಅಂತಿಮ ಒಪ್ಪಂದದ ಕರಡು ರಚನೆಗೆ ಎರಡೂ ಕಂಪನಿಗಳು ಇನ್ನಷ್ಟು ಸಮಯವನ್ನು ತೆಗೆದುಕೊಳ್ಳಲಿವೆ' ಎಂದು ಮೂಲಗಳು ತಿಳಿಸಿವೆ. ಈ ವಿಮಾನ ತಯಾರಿಕೆಯ ಹೊಸ ಘಟಕವನ್ನು ಎಲ್ಲಿ ಸ್ಥಾಪಿಸಲಾಗುತ್ತದೆ ಎಂಬುದನ್ಹು ಇನ್ನೂ ನಿರ್ಧರಿಸಿಲ್ಲ.
'ಎಸ್‌ಜೆ-100 ವಿಮಾನಗಳ ತಯಾರಿಕೆಯು ಭಾರತೀಯ ವಾಯುಯಾನ ಉದ್ಯಮದ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭದ ಸೂಚನೆಯಾಗಿದೆ. ಇದು ಖಾಸಗಿ ವಲಯವನ್ನು ಬಲಪಡಿಸುತ್ತದೆ. ಮಾತ್ರವಲ್ಲ, ವಾಯುಯಾನ ಉದ್ಯಮದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ' ಎಂದು ಎಚ್‌ಎಎಲ್ ಹೇಳಿದೆ.




