ನೂತನ ಆದೇಶದ ಅನ್ವಯ ಇನ್ಮುಂದೆ ಕಿಶೋರ್ ಗೆ ದೇಶದ ಯಾವುದೇ ನ್ಯಾಯಾಲಯದಲ್ಲಿ ವಕಾಲತ್ತು ಮಾಡುವುದಕ್ಕೆ ಅಥವಾ ವಾದಿಸಲು ಅವಕಾಶವಿರುವುದಿಲ್ಲ.
71 ವರ್ಷದ ಕಿಶೋರ್, ದೆಹಲಿಯ ಮಯೂರ್ ವಿಹಾರ್ ನಿವಾಸಿಯಾಗಿದ್ದು, ಸೋಮವಾರ ಬೆಳಿಗ್ಗೆ 11.35 ರ ಸಮಯದಲ್ಲಿ ನ್ಯಾಯಾಲಯ ಸಂಖ್ಯೆ 1 ರಲ್ಲಿ ನಡೆಯುತ್ತಿದ್ದ ವಿಚಾರಣೆಯ ವೇಳೆ ತನ್ನ ಶೂ ಗಳನ್ನು ಸಿಜೆಐ ಪೀಠದ ಕಡೆ ಎಸೆಯಲು ಯತ್ನಿಸಿದ್ದ. ಭದ್ರತಾ ಸಿಬ್ಬಂದಿ ತಕ್ಷಣವೇ ಆತನನ್ನು ಹಿಡಿದು ಹೊರಗೆ ಕರೆದುಕೊಂಡು ಹೋದರು.
ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಪ್ರಕಟಿಸಿದ ಮಧ್ಯಂತರ ಆದೇಶದಲ್ಲಿ, ಈ ಕೃತ್ಯವು "ನ್ಯಾಯಾಲಯದ ಘನತೆಗೆ ವಿರುದ್ಧವಾದದ್ದು" ಮತ್ತು "ವೃತ್ತಿಪರ ನೀತಿಶಾಸ್ತ್ರದ ಉಲ್ಲಂಘನೆ" ಎಂದು ಉಲ್ಲೇಖಿಸಲಾಗಿದೆ. ಆದೇಶದಲ್ಲಿ, ಕಿಶೋರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು 15 ದಿನಗಳಲ್ಲಿ ಸ್ಪಷ್ಟನೆ ನೀಡಲು ನೋಟಿಸ್ ನೀಡಲಾಗಿದೆ.
ದಿಲ್ಲಿಯ ಬಾರ್ ಕೌನ್ಸಿಲ್ ಈ ಆದೇಶವನ್ನು ಎಲ್ಲಾ ನ್ಯಾಯಾಲಯಗಳಿಗೆ ತಿಳಿಸಿ ಅದನ್ನು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಲು ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಗಳು ಮತ್ತು ಜಿಲ್ಲಾ ನ್ಯಾಯಾಲಯಗಳು ಈ ಆದೇಶದ ಪ್ರತಿಗಳನ್ನು ಸಂಬಂಧಿತ ಬಾರ್ ಅಸೋಸಿಯೇಷನ್ ಗಳಿಗೆ ಹಂಚಲಿವೆ ಎಂದು ತಿಳಿದು ಬಂದಿದೆ.




