ತ್ರಿಶೂರು: ಶಬರಿಮಲೆ ದೇವಾಲಯದಲ್ಲಿ ಚಿನ್ನದ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯನ್ನು ಶುಕ್ರವಾರ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ಆತನ ಪೊಲೀಸ್ ಕಸ್ಟಡಿಯ ಅವಧಿಯು ಗುರುವಾರಕ್ಕೆ ಕೊನೆಗೊಂಡಿತ್ತು.
ತಾನು ಮೂರ್ಛೆರೋಗದಿಂದ ಬಳಲುತ್ತಿದ್ದು, ಜೈಲುವಾಸದಲ್ಲಿರಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯು ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾನ್ನಿ ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ಇದಕ್ಕೆ ಆಕ್ಷೇಪಿಸಿದ ಪ್ರಾಸಿಕ್ಯೂಶನ್ ವಕೀಲರು, ಜೈಲು ಅಧಿಕಾರಿಗಳು ಎಲ್ಲಾ ವಿಧದ ವೈದ್ಯಕೀಯ ನೆರವನ್ನು ಒದಗಿಸಲು ಸಾಧ್ಯವಿದೆ ಎಂದು ಹೇಳಿದ್ದರು. ಆನಂತರ ನ್ಯಾಯಾಲಯವು ಆತನನ್ನು ತಿರುವನಂತಪುರದ ವಿಶೇಷ ಸಬ್ ಜೈಲಿಗೆ ವರ್ಗಾಯಿಸಲು ಆದೇಶಿಸಿದೆ.
ಶಬರಿಮಲೆ ದೇವಾಲಯದ ದ್ವಾರದ ಚಿನ್ನದ ಹಾಸುಗಳ ಕಳವಿಗೆ ಸಂಬಂಧಿಸಿದ ಎರಡನೇ ಪ್ರಕರಣದಲ್ಲಿಯೂ ಪೊಟ್ಟಿಯನ್ನು ಸೋಮವಾರ ಮತ್ತೆ ರಾನ್ನಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು ಕಸ್ಟಡಿ ಅವಧಿ ವಿಸ್ತರಣೆ ಕೋರಿ ಅರ್ಜಿಯನ್ನು ಸಲ್ಲಿಸಲಿದೆ.
ಪ್ರಕರಣದ ಇನ್ನೋರ್ವ ಆರೋಪಿ ಮುರಾರಿ ಬಾಬುನನ್ನು ವಿಶೇಷ ತನಿಖಾ ತಂಡವು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಆತನನ್ನು ಕೂಡಾ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.
ಪೊಟ್ಟಿ ಹಾಗೂ ಬಾಬು ಅವರನ್ನು ಈ ವಾರದ ಆರಂಭದಲ್ಲಿ ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು. ರಾನ್ನಿಯ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬಾಬುನನ್ನು ನಾಲ್ಕು ದಿನಗಳ ಅವಧಿಗೆ SIT ಕಸ್ಟಡಿಗೆ ಒಪ್ಪಿಸಿತ್ತು. SIT ತನಿಖಾ ತಂಡವು ಪುರಾವೆಗಳ ಸಂಗ್ರಹಕ್ಕಾಗಿ ಇಬ್ಬರೂ ಆರೋಪಿಗಳನ್ನು ಶಬರಿಮಲೆಗೆ ಕೊಂಡೊಯ್ದಿತ್ತು. ಈ ನಡುವೆ ಬಳ್ಳಾರಿಯಲ್ಲಿ ವಶಪಡಿಸಿಕೊಳ್ಳಲಾದ ಶಬರಿಮಲೆ ಅಪಹೃತ ಚಿನ್ನವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
ಶಬರಿಮಲೆ ಚಿನ್ನದ ಅಪಹರಣ ಪ್ರಕರಣ ಕೇರಳ ರಾಜಕೀಯದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ. ಕೇರಳ ದೇವಸ್ವಂ ಸಚಿವ ತತವಿ.ಎನಂ. ವಾಸವನ್ ಅವರು ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಬಿಜೆಪಿ ಆರೋಪಿಸಿದೆ.




