ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಸಭೆಯನ್ನು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಉದ್ಘಾಟಿಸಿದರು. ಅಭಿವೃದ್ಧಿ ತಲುಪದ ಗ್ರಾಮ ಎಂಬ ಹಣೆಪಟ್ಟಿ ಹೊಂದಿದ್ದ ಪುತ್ತಿಗೆ ಈಗ ಸಾಮೂಹಿಕ ಪ್ರಯತ್ನದ ಮೂಲಕ ಇತರ ಪಂಚಾಯತಿಗಳಿಗೆ ಹೋಲಿಸಬಹುದಾದ ಅಭಿವೃದ್ಧಿ ಚಟುವಟಿಕೆಗಳೊಂದಿಗೆ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು. ಪಂಚಾಯತ್‍ನಲ್ಲಿರುವ ಸರ್ಕಾರಿ ಶಾಲೆಗಳ ಜೊತೆಗೆ, ಅನುದಾನರಹಿತ ಶಾಲೆಗಳನ್ನು ಸಹ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಲಾಗಿದೆ ಎಂಬುದು ಅನುಕರಣೀಯ ಎಂದು ಅವರು ಹೇಳಿದರು.
ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಯದರ್ಶಿ ವಿ.ಸಿ. ಜೋಬಿ ಪಂಚಾಯತಿಯ ಅಭಿವೃದ್ಧಿ ವರದಿಯನ್ನು ಮಂಡಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ಅಭಿವೃದ್ಧಿ ಅಧಿವೇಶನವನ್ನು ಪರಿಚಯಿಸಿದರು. ರಾಜ್ಯ ಸರ್ಕಾರದ ಅಭಿವೃದ್ಧಿ ಸಾಧನೆಗಳನ್ನು ಒಳಗೊಂಡ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಿದ್ಧಪಡಿಸಲಾದ ವೀಡಿಯೊ ಮತ್ತು ಸ್ಥಳೀಯಾಡಳಿತ ಸಚಿವ ಎಂ.ಬಿ. ರಾಜೇಶ್ ಮತ್ತು ಜಿಲ್ಲಾ ಉಸ್ತುವಾರಿ ಅರಣ್ಯ ಮತ್ತು ವನ್ಯಜೀವಿ ಸಚಿವ ಎ.ಕೆ. ಶಶೀಂದ್ರನ್ ಅವರ ಸಂದೇಶವನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ನಂತರ ಪಂಚಾಯತಿಯ ಅಭಿವೃದ್ಧಿ ಸಾಧನೆಗಳನ್ನು ಒಳಗೊಂಡ ವೀಡಿಯೊವನ್ನು ಪ್ರದರ್ಶಿಸಲಾಯಿತು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಜಯಂತಿ, ಸಿಡಿಎಸ್ ಅಧ್ಯಕ್ಷೆ ಹೇಮಾವತಿ, ವಿವಿಧ ಪಕ್ಷದ ರಾಜಕೀಯ ಪ್ರತಿನಿಧಿಗಳು, ಸದಸ್ಯರು, ನೌಕರರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್‍ನ ಹಸಿರು ಕ್ರಿಯಾಸೇನೆ ಸದಸ್ಯರನ್ನು ಸನ್ಮಾನಿಸಲಾಯಿತು. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್. ಎಂ.ಎಚ್. ಸ್ವಾಗತಿಸಿ, ವಂದಿಸಿದರು.

.jpeg)
