ಚಂಡೀಗಢ: ಪಾಕ್ ಪರ ಬೇಹುಗಾರಿಕೆ ಆರೋಪದಲ್ಲಿ ಬಂಧಿತ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ ಜಾಮೀನು ಮಂಜೂರು ಮಾಡಲು ಹರ್ಯಾಣದ ಹಿಸಾರ್ ನಲ್ಲಿನ ನ್ಯಾಯಾಲಯ ನಿರಾಕರಿಸಿದೆ.
ಒಂದು ವೇಳೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರೆ, ತನಿಖೆಯ ಮೇಲೆ ದುಷ್ಪರಿಣಾಮವುಂಟಾಗಬಹುದು ಎಂಬ ಅನುಮಾನಗಳು ಸಕಾರಣವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಈ ಕುರಿತು ವಿಸ್ತೃತ ಆದೇಶ ಹೊರಡಿಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಡಾ.ಪರ್ಮಿಂದರ್ ಕೌರ್, ಜ್ಯೋತಿ ಮಲ್ಹೋತ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಒಂದು ವೇಳೆ ಈ ಪ್ರಕರಣದಲ್ಲಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಆರೋಪಗಳು ದೃಢಪಟ್ಟರೆ, ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತಾ ಪರಿಗಣನೆಗಳು ವಿಶೇಷ ಮಹತ್ವ ಪಡೆದುಕೊಳ್ಳುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.




