ತಿರುವನಂತಪುರಂ: ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾ ಕಂಪನಿ ತಯಾರಿಸುವ ಔಷಧಗಳ ವಿತರಣೆಯನ್ನು ಕೇರಳ ಸರ್ಕಾರ ಮಂಗಳವಾರ ನಿಷೇಧಿಸಿದೆ.
ಶ್ರೀಸನ್ ಕಂಪನಿಯ ಪರವಾನಗಿಯನ್ನು ರದ್ದುಗೊಳಿಸುವ ತಮಿಳುನಾಡು ಡ್ರಗ್ಸ್ ಕಂಟ್ರೋಲರ್ ಅವರ ಕ್ರಮಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಗುಜರಾತ್ ಮೂಲದ ಕಂಪನಿ ತಯಾರಿಸುವ 'ರೆಸ್ಪಿಫ್ರೆಶ್ ಟಿಆರ್' ಔಷಧಿಯ ಗುಣಮಟ್ಟ ಕಳಪೆಯಾಗಿರುವುದು ಕಂಡುಬಂದಿದ್ದು, ಅದರ ವಿತರಣೆಯನ್ನು ತಕ್ಷಣವೇ ನಿಲ್ಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಐವರು ವಿತರಕರು ಈ ಔಷಧಗಳನ್ನು ಪೂರೈಸುತ್ತಿದ್ದು, ವಿತರಣೆಯನ್ನು ನಿಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದಿದ್ದಾರೆ.
'ಈ ಔಷಧ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಆಸ್ಪತ್ರೆಗಳ ಮೂಲಕ ಈ ಔಷಧಗಳನ್ನು ವಿತರಿಸಲಾಗುವುದಿಲ್ಲ' ಎಂದು ಹೇಳಿದ್ದಾರೆ.
ಕೆಮ್ಮಿನ ಸಿರಪ್ ಸೇವನೆಯಿಂದ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ 14 ಮಕ್ಕಳು ಮೃತಪಟ್ಟ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಕೇರಳ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.




