ಜೆರುಸಲೇಂ: ಅಂತಾರಾಷ್ಟ್ರೀಯ ರೆಡ್‍ಕ್ರಾಸ್ ಸಮಿತಿ(ಐಸಿಆರ್‌ಸಿ) `ಕಾನೂನುಬಾಹಿರ ಹೋರಾಟಗಾರರನ್ನು ' ಗುರಿಯಾಗಿಸುವ ಕಾನೂನಿನಡಿ ಬಂಧಿಸಲ್ಪಟ್ಟಿರುವ ಫೆಲೆಸ್ತೀನೀಯರನ್ನು ಭೇಟಿಯಾಗುವುದನ್ನು ನಿಷೇಧಿಸಿರುವುದಾಗಿ ಇಸ್ರೇಲ್‍ನ ರಕ್ಷಣಾ ಸಚಿವರು ಹೇಳಿದ್ದಾರೆ.
`ಬಂಧನದಲ್ಲಿರುವವರನ್ನು ರೆಡ್‍ಕ್ರಾಸ್ ಭೇಟಿಯಾಗುವುದು ರಾಷ್ಟ್ರದ ಭದ್ರತೆಗೆ ಗಂಭೀರ ಹಾನಿಯೆಸಗುವುದರಲ್ಲಿ ಸಂದೇಹವಿಲ್ಲ. ರಾಷ್ಟ್ರದ ಮತ್ತು ನಮ್ಮ ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತೇವೆ' ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಹೇಳಿದ್ದಾರೆ.
ಇಸ್ರೇಲ್ ಕಾನೂನಿನ ಪ್ರಕಾರ, 2022ರಲ್ಲಿ ಪರಿಚಯಿಸಲಾದ `ಕಾನೂನುಬಾಹಿರ ಹೋರಾಟಗಾರರ' ವರ್ಗವು ಮಿಲಿಟರಿ ಬಂಧನ ಕೇಂದ್ರಗಳಲ್ಲಿ ಯಾವುದೇ ಆರೋಪವಿಲ್ಲದೆ ವ್ಯಕ್ತಿಗಳನ್ನು ಅನಿರ್ದಿಷ್ಟಾವಧಿಯ ಬಂಧನಕ್ಕೆ ಅವಕಾಶ ನೀಡುತ್ತದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದಂದಿನಿಂದ ಈ ಕಾನೂನು ಜಾರಿಯಲ್ಲಿದೆ ಎಂದು ಇಸ್ರೇಲ್ ಹೇಳಿದೆ.
ಅಂದಿನಿಂದ ಇಲ್ಲಿಯವರೆಗೆ ಜೈಲಿನಲ್ಲಿರುವ ಬಂಧಿತರನ್ನು ಭೇಟಿ ಮಾಡಲು ಅನುಮತಿ ನೀಡಲಾಗಿಲ್ಲ. ಬಂಧನದ ಸ್ಥಳಗಳಿಗೆ ಐಸಿಆರ್‌ಸಿ ಭೇಟಿಯು ಸಂಪೂರ್ಣ ಮಾನವೀಯ ಉದ್ದೇಶದ್ದಾಗಿದೆ. ನಾವು ಬಂಧಿತರಿಗೆ ಚಿಕಿತ್ಸೆ ಪಡೆಯುವ ಅವಕಾಶ, ಬಂಧಿತರ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿ ಇವು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿದೆ ಎಂಬುದನ್ನು ಖಾತರಿಪಡಿಸುವ ಹಾಗೂ ಬಂಧಿತರು ಮತ್ತು ಅವರ ಕುಟುಂಬಗಳ ನಡುವಿನ ಸಂಪರ್ಕವನ್ನು ಮರುಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದೇವೆ' ಎಂದು ರೆಡ್‍ಕ್ರಾಸ್ ಸಮಿತಿ ಹೇಳಿದೆ.




