ನವದೆಹಲಿ: ಈ ತಿಂಗಳು ಹಬ್ಬದ ಋತು ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಶೇ 3 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಕೇಂದ್ರ ಸಚಿವ ಸಂಪುಟವು ಒಮ್ಮೆ ಅನುಮೋದನೆ ನೀಡಿದ ನಂತರ, ಈ ಹೆಚ್ಚಳವು ಜುಲೈ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
ಸಂಪುಟ ಅನುಮೋದನೆ ನೀಡಿದ ಬಳಿಕ ಇದು ಈ ವರ್ಷದ ಎರಡನೇ ಹೆಚ್ಚಳವಾಗಲಿದೆ. ಮಾರ್ಚ್‌ನಲ್ಲಿ ಶೇ 2ರಷ್ಟು ಡಿಎ ಹೆಚ್ಚಳ ಮಾಡಲಾಗಿತ್ತು. ಆಗ ಮೂಲ ವೇತನದ ಶೇ 53 ರಷ್ಟಿದ್ದ ತುಟ್ಟಿ ಭತ್ಯೆ ಶೇ 55ಕ್ಕೆ ಹೆಚ್ಚಳವಾಗಿತ್ತು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶೇ 3ರಷ್ಟು ಡಿಎ ಹೆಚ್ಚಳ ಮಾಡಲಾಗಿತ್ತು.ಹಣದುಬ್ಬರವನ್ನು ಸರಿದೂಗಿಸಲು ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಮಾಡಲಾಗುತ್ತದೆ.
ಈ ತಿಂಗಳ ಹೆಚ್ಚಳವು ಸಿಪಿಐ ಅಥವಾ ಗ್ರಾಹಕ ಬೆಲೆ ಸೂಚ್ಯಂಕದ ಚಲನೆಗೆ ಹೊಂದಿಕೆಯಾಗುವ ನಿರೀಕ್ಷೆಯಿದೆ.




