ಕೋಝಿಕ್ಕೋಡ್: ಮಲಪ್ಪುರಂ ಜಿಲ್ಲೆಯನ್ನು ವಿಭಜಿಸಬೇಕೆಂಬ ಮುಸ್ಲಿಂ ಲೀಗ್ ಮುಖಂಡ ಹಾಗೂ ತಿರೂರ್ ಶಾಸಕ ಕುರುಕ್ಕೋಳಿ ಮೊಯ್ದೀನ್ ಅವರ ಬೇಡಿಕೆಯನ್ನು ಮುಸ್ಲಿಂ ಲೀಗ್ ತಿರಸ್ಕರಿಸಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಂ ಮಾತನಾಡಿ, ಮಲಪ್ಪುರಂ ಜಿಲ್ಲೆ ವಿಭಜನೆ ಕುರಿತು ಮುಸ್ಲಿಂ ಲೀಗ್ ಚರ್ಚಿಸಿಲ್ಲ ಅಥವಾ ತೀರ್ಮಾನ ಕೈಗೊಂಡಿಲ್ಲ ಎಂದಿರುವರು.
ಕುರುಕ್ಕೋಳಿ ಮೊಯ್ದೀನ್ ಅವರ ಅಭಿಪ್ರಾಯ ವೈಯಕ್ತಿಕವಾಗಿದೆ ಎಂದೂ ಪಿಎಂಎ ಸಲಾಂ ಹೇಳಿದ್ದಾರೆ. ಮಂಗಳವಾರ ಮಲಪ್ಪುರಂನಲ್ಲಿ ನಡೆದ ಜಿಲ್ಲಾ ಕಂದಾಯ ಸಭೆಯಲ್ಲಿ ಮಲಪ್ಪುರಂ ಜಿಲ್ಲೆಯನ್ನು ವಿಭಜಿಸಿ ತಿರೂರ್ ಜಿಲ್ಲೆ ರಚಿಸುವಂತೆ ಕುರುಕ್ಕೋಳಿ ಮೊಯ್ದೀನ್ ಒತ್ತಾಯಿಸಿದ್ದರು.
ಕುರುಕ್ಕೋಳಿ ಮೊಯ್ದೀನ್ ಅವರು ತಾನೂರ್, ತಿರುರಂಗಡಿ, ಪೊನ್ನಾನಿ ತಾಲೂಕುಗಳನ್ನು ಸೇರಿಸಿ ಕರಾವಳಿ ಜಿಲ್ಲೆ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದರು. ಮೊಯ್ದೀನ್ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಜಿಲ್ಲಾ ವಿಭಜನೆ ಅಗತ್ಯ ಎಂದಿದ್ದರು.




