ಕಾಸರಗೋಡು: ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆಯನ್ನು ಕಳೆದ ಮೂರು ತಿಂಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಹಾದಿಯಾಗಿ ವಾರಕ್ಕೆ ನಾಲ್ಕು ವಿಮಾನಗಳು ನಿಯಮಿತವಾಗಿ ನಡೆಸುತ್ತಿದ್ದ ಸೇವೆ ಏಕಾಏಕಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮಸ್ಕತ್‍ನಲ್ಲಿ ನೆಲೆಸಿರುವ ಕರಾವಳಿ ಪ್ರದೇಶದ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.
ಗಲ್ಫ್‍ನ ಬಹುತೇಕ ರಾಷ್ಟ್ರಗಳಿಗೆ ನೇರ ವಿಮಾನ ಸೇವೆ ಮುಂದುವರಿದಿರುವ ಸಂದರ್ಭದಲ್ಲಿ, ಇತ್ತೀಚೆಗೆ ಕುವೈತ್ ದೇಶಕ್ಕೂ ನೇರ ವಿಮಾನ ಸೇವೆ ಆರಂಭಗೊಂಡಿದೆ. ಆದರೆ ಮಸ್ಕತ್‍ನಿಂದ ಮಂಗಳೂರಿಗೆ ಪ್ರಯಾಣಿಸುವವರು ಈಗ ದೆಹಲಿ, ಮುಂಬೈ ಅಥವಾ ಕೇರಳದ ಕಣ್ಣೂರು ಮೂಲಕ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದಿನ ಪೂರ್ತಿ ಪ್ರಯಾಣದ ನಂತರವಷ್ಟೆ ಮಂಗಳೂರು ತಲುಪಬೇಕಾಗಿರುವುದರಿಂದ ಅನೇಕ ಮಂದಿ ಅನಿವಾಸಿ ಪ್ರವಾಸಿಗರು ಸಂಕಷ್ಟ ಅನುಭವಿಸುವಂತಾಗಿದೆ.
ವಾರಕ್ಕೆ ನಾಲ್ಕು ವಿಮಾನಗಳ ಬದಲು ಕನಿಷ್ಠ ಎರಡು ವಿಮಾನ ಸೇವೆ ಮರುಪ್ರಾರಂಭಿಸಬೇಕೆಂಬುದು ಓಮಾನ್‍ನಲ್ಲಿ ನೆಲೆಸಿರುವ ಕುಮಟಾ, ಕುಂದಾಪುರ, ಉಡುಪಿ, ಚಿಕ್ಕಮಗಳೂರು, ಮಂಗಳೂರು ಹಾಗೂ ಕಾಸರಗೋಡು ಪ್ರದೇಶದ ಅನಿವಾಸಿಗಳ ಆಗ್ರಹವಾಗಿದೆ. ಈ ಕುರಿತು ತಕ್ಷಣ ಸ್ಪಂದಿಸುವಂತೆ ಅವರು ಮನವಿ ಮಾಡಿದ್ದಾರೆ.
ಸಂಸದರಿಗೆ ಮನವಿ:
ಮಸ್ಕತ್ ಮತ್ತು ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು (ಎನ್‍ಆರ್‍ಐ) ಈ ನೇರ ವಿಮಾನ ಸೇವೆಯನ್ನು ಮರುಸ್ಥಾಪಿಸಲು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಓಮಾನ್‍ನ ಹಿರಿಯ ಸಮುದಾಯ ನಾಯಕ ಮಲ್ಲಾರ್ ಶಶಿಧರ ಶೆಟ್ಟಿ ಅವರು ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಗಮನಕ್ಕೂ ತಂದಿದ್ದಾರೆ.
ಗಡಿನಾಡ ಸಾಹಿತ್ಯ ಅಕಾಡೆಮಿ-ಓಮಾನ್, ಕೆಎಂಸಿಸಿ ಮಂಜೇಶ್ವರ ಮಂಡಲ ಅಧ್ಯಕ್ಷ ಅಬೂಬಕ್ಕರ್ ರಾಯಲ್ ಬೂಲ್ಲಾರ್, ಕರ್ನಾಟಕ ಜಾನಪದ ಪರಿಷತ್ತು - ಓಮಾನ್ ಘಟಕ ಅಧ್ಯಕ್ಷ ಶಿವಾನಂದ ಕೋಟ್ಯಾನ್, ಮೊಗವೀರ ಮಸ್ಕತ್ ಅಧ್ಯಕ್ಷ ಪದ್ಮಾಕರ ಮೆಂಡನ್, ಮಸ್ಕತ್ ಹಿರಿಯರಾದ ಯುವರಾಜ್ ಮಸ್ಕತ್, ವಿಠಲ ಪೂಜಾರಿ, ಮತ್ತು ಮಸ್ಕತ್ ಕ್ರಿಕೆಟ್ ಹಿರಿಯ ಆಟಗಾರ ಸತೀಶ್ ಬಾರ್ಕರು ಮೊದಲಾದವರು ಮನವಿ ಸಲ್ಲಿಸಿದ್ದಾರೆ.
ಸರ್ಕಾರ ಮತ್ತು ವಿಮಾನಯಾನ ಇಲಾಖೆಯು ಈ ವಿಷಯಕ್ಕೆ ತಕ್ಷಣ ಸ್ಪಂದಿಸಿ, ಮಸ್ಕತ್-ಮಂಗಳೂರು ನೇರ ವಿಮಾನ ಸೇವೆ ಪುನರಾರಂಭಿಸುವಂತೆ ಅವರು ಮನವಿ ಮೂಲಕ ಒತ್ತಾಯಿಸಿದ್ದಾರೆ.




