HEALTH TIPS

ಅಪಾಯಕಾರಿ ಕೆಮ್ಮಿನ ಸಿರಪ್‌ಗಳ ಮಾರಾಟ ನಿಲ್ಲಿಸಲು ಭಾರತ ಬಹಳಷ್ಟು ಶ್ರಮಿಸಬೇಕಾಗಿದೆ : ವಿಶ್ವ ಆರೋಗ್ಯ ಸಂಸ್ಥೆ

ಲಂಡನ್: ವಿಷಕಾರಿಯಾದ ಕೆಮ್ಮಿನ ಔಷಧಿಗಳ ಮಾರಾಟವನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಅಲ್ಪಸ್ವಲ್ಪ ಪ್ರಗತಿ ಸಾಧಿಸಿದ ಹೊರತಾಗಿಯೂ ಭಾರತವು ಈ ಬಗ್ಗೆ ಇನ್ನೂ ಹೆಚ್ಚು ಶ್ರಮಿಸಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಓ) ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಶ್ರೀಸನ್ ಫಾರ್ಮಾದ 'ಕೋಲ್ಡ್ರಿಫ್' ಕೆಮ್ಮಿನ ಔಷಧಿಯ ಸೇವಿಸಿದ ಬಳಿಕ ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಕನಿಷ್ಠ 24 ಮಂದಿ ಮಕ್ಕಳು ಮೃತಪಟ್ಟಿದ್ದರು. ಈ ಕೆಮ್ಮಿನ ಔಷಧಿಯಲ್ಲಿರುವ ಅಪಾಯಕಾರಿ ಡೈಥಿಲೀನ್ ಗ್ಲೈಕೋಲ್‌ನ ಪ್ರಮಾಣವು ಅನುಮತಿಸಲ್ಪಟ್ಟ ಮಿತಿಗಿಂತ 500 ಪಟ್ಟು ಅಧಿಕವಾಗಿತ್ತೆಂದು ಪರೀಕ್ಷೆಯಲ್ಲಿ ಕಂಡುಬಂದಿದೆಯೆಂದು ಡಬ್ಲ್ಯುಎಚ್‌ಓ ಅಧಿಕಾರಿಗಳು ತಿಳಿಸಿರುವುದಾಗಿ ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದಕ್ಕೂ ಮುನ್ನ ಭಾರತ ಹಾಗೂ ಇಂಡೊನೇಶ್ಯಗಳಲ್ಲಿ ತಯಾರಿಸಲಾದ ಸಿರಫ್‌ ಆಧಾರಿತ ಔಷಧಿಗಳಲ್ಲಿರುವ ಅಪಾಯಕಾರಿ ಅಂಶಗಳಿಂದಾಗಿ ಜಗತ್ತಿನಾದ್ಯಂತ 300ಕ್ಕೂ ಅಧಿಕ ಮಕ್ಕಳು ಮೃತಪಟ್ಟ ಘಟನೆಯ ಬಳಿಕ ವ್ಯವಸ್ಥೆಯನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಎರಡು ವರ್ಷಗಳ ಬಳಿಕ ಈ ದುರಂತ ಸಂಭವಿಸಿದೆ.

ಔಷಧಿಗಳ ರಫ್ತಿಗೆ ಮುನ್ನ ಅವುಗಳಲ್ಲಿ ಡೈಥಿಲಿನ್ ಹಾಗೂ ಎಥೆಲೈನ್ ಗ್ಲೈಕೋಲ್‌ನಂತಹ ಮಾಲಿನ್ಯಕಾರಕಗಳ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ನೂತನ ಕಾನೂನನ್ನು ಭಾರತ ಜಾರಿಗೊಳಿಸಿರುವುದನ್ನು ಪ್ರಸ್ತಾವಿಸಿದ ಡಬ್ಲ್ಯುಎಚ್‌ಓ ಅಧಿಕಾರಿ ರುಟೆಂಡೊ ಕುವಾನಾ ಅವರು, ಔಷಧಿಗಳ ಸುರಕ್ಷತೆಯಲ್ಲಿ ಭಾರತ ಒಂದಿಷ್ಟು ಪ್ರಗತಿ ಸಾಧಿಸಿದೆ ಎಂದರು.

ಆದಾಗ್ಯೂ ಸ್ಥಳೀಯವಾಗಿ ಮಾರಾಟಮಾಡುವ ಔಷಧಿಗಳಿಗೆ ಅಂತಹ ಕಾನೂನುಗಳು ಇಲ್ಲದಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವರ್ಷಾಂತ್ಯದೊಳಗೆ ಔಷಧಿ ಕಂಪೆನಿಗಳು ತಮ್ಮ ಘಟಕಗಳನ್ನು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸಿದ ಬಳಿಕ ಹಾಲಿ ರಫ್ತು ನೀತಿಯನ್ನು ರದ್ದುಪಡಿಸಿ, ಹೊಸ ಕಾನೂನನ್ನು ಜಾರಿಗೊಳಿಸುವ ಯೋಜನೆಯನ್ನು ಭಾರತ ಹೊಂದಿರುವುದಾಗಿ ರಾಯ್ಟರ್ಸ್‌ ಕಳೆದ ವಾರ ವರದಿ ಮಾಡಿತ್ತು.

ಕಾನೂನು ಪ್ರಕಾರ ಭಾರತದ ಔಷಧಿ ತಯಾರಕರು ಕಚ್ಚಾ ಸಾಮಾಗ್ರಿಗಳು ಹಾಗೂ ಉತ್ಪನ್ನದ ಪ್ರತಿಯೊಂದು ಬ್ಯಾಚ್ ಅನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಆದರೆ ಕೆಲವು ಸಂಸ್ಥೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲವೆಂದು ಕೇಂದ್ರ ಔಷಧಿ ಮಾನದಂಡ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಓ) ಇತ್ತೀಚೆಗೆ ತಿಳಿಸಿತ್ತು.

ಔಷಧಿಗಳಲ್ಲಿರುವ ವಿಷಕಾರಿಯಾದ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ಪರೀಕ್ಷಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಆ ಬಗ್ಗೆ ಡಬ್ಲ್ಯು ಎಚ್‌ಓ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಸೇರಿದಂತೆ ವಿವಿಧ ರಾಷ್ಟ್ರಗಳು ಭಾಗವಹಿಸಿದ್ದವು. ಆದರೆ ಭಾರತ ಪಾಲ್ಗೊಂಡಿರಲಿಲ್ಲವೆೆಂದು ಕುವಾನಾ ಅವರು ತಿಳಿಸಿದ್ದಾರೆ. ಆದರೆ ತಾನು ಆ ಪರೀಕ್ಷಾ ವಿಧಾನವನ್ನು ಬಳಸುತ್ತಿರುವುದಾಗಿ ಭಾರತ ಡಬ್ಲ್ಯುಎಚ್‌ಓಗೆ ದೃಢಪಡಿಸಿದೆಯೆಂದು ಕುವಾನಾ ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries