ಬದಿಯಡ್ಕ: ನೀರ್ಚಾಲು ಸಮೀಪದ ಕೊಲ್ಲಂಗಾನ ಶ್ರೀ ಶಾರದಾ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯದ ವಿನಂತಿ ಪತ್ರ ಬಿಡುಗಡೆ, ಕೂಪನ್ ಬಿಡುಗಡೆ ಹಾಗೂ ನಿಧಿ ಸಮರ್ಪಣಾ ಸಮಾರಂಭ ಗುರುವಾರ ವಿಜಯದಶಮಿಯ ಶುಭದಿನದಂದು ಜರಗಿತು. ಶ್ರೀಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪಬೆಳಗಿಸಿ, ವಿನಂತಿ ಪತ್ರ ಬಿಡುಗಡೆಗೊಳಿಸಿದರು. ಆಶೀರ್ವಚನವನ್ನು ನೀಡಿ ಮಾತನಾಡಿ, ಸಮಾಜವನ್ನು ಒಂದುಗೂಡಿಸುವಲ್ಲಿ ಮಂದಿರಗಳು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಧಾರ್ಮಿಕ ಕೇಂದ್ರಗಳಲ್ಲಿ ಯುವಜನಾಂಗವು ಸಂಘಟಿತರಾಗುತ್ತಿರುವುದು ಉತ್ತಮ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಭಜನ ಮಂದಿರಗಳು ಧಾರ್ಮಿಕ ಕ್ಷೇತ್ರಕ್ಕೆ ಬಲುದೊಡ್ಡ ಕೊಡುಗೆಯನ್ನು ನೀಡಿದೆ ಎಂದರು.
ಮಂದಿರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉಳಿಯತ್ತಾಯ ವಿಷ್ಣು ಆಸ್ರ ಕೂಪನ್ ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯೆಗಿಂತ ಮಿಗಿಲಾದ ಸಂಪತ್ತಿಲ್ಲ ಎಂಬುದು ಆಸ್ತಿಕರ ನಂಬಿಕೆ. ಅಂತಹ ವಿದ್ಯಾದೇವತೆ ಶಾರದೆಯನ್ನು ಕಳೆದ ಅನೇಕ ವರ್ಷಗಳಿಂದ ಪೂಜಿಸುತ್ತಾ ಬರುತ್ತಿದ್ದು, ಆಕೆ ನಾಡಿನ ಜನರ ಇಷ್ಟಾರ್ಥಗಳನ್ನು ಸಿದ್ಧಿಸುವಲ್ಲಿ ಕಾರಣಳಾಗಿದ್ದಾಳೆ ಎನ್ನುವುದು ಅಭಿಮಾನದ ವಿಚಾರವಾಗಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾವಡ ಓಣಿಕುಂಡು ಅಧ್ಯಕ್ಷತೆ ವಹಿಸಿದ್ದರು. ಕೇರಳ ವಿದ್ಯುತ್ ಇಲಾಖೆಯ ನಿರ್ದೇಶಕ ಪಿ.ಸುರೇಂದ್ರನ್, ನಿವೃತ್ತ ಸಹಾಯಕ ಮೀಟಿಯೋರೋಲಜಿಸ್ಟ್ ಶಶಿಕಾಂತ್ ಶೆಟ್ಟಿ ಚೆಂಗಳ ಗುತ್ತು, ಯುಎಇ ಇಂಜಿನಿಯರ್ ಸುಬ್ರಹ್ಮಣ್ಯ ಭಟ್ ಓಣಿಕುಂಡು, ಹಿರಿಯರಾದ ಮಾನ ಮಾಸ್ತರ್ ಮಾನ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಕೊಲ್ಲಂಗಾನ, ಆಡಿಟ್ ಆಫೀಸರ್ ಗೋಪಾಲಕೃಷ್ಣ ಪಿ., ನಿವೃತ್ತ ರೈಲ್ವೇ ಅಧಿಕಾರಿ ಐತ್ತಪ್ಪ ನಾಯ್ಕ್ ಮರ್ದಂಬೈಲು, ಉದ್ಯಮಿ ರಾಮ ಕಾರ್ಮಾರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಪ್ರಮುಖರಾದ ಶ್ಯಾಮಪ್ರಸಾದ ಮೇಗಿನಡ್ಕ, ಮಹೇಶ್ ವಳಕ್ಕುಂಜ, ಸಂತೋಷ್ ಕುಮಾರ್ ಮಾನ್ಯ ಶುಭಾಶಂಸನೆಗೈದರು. ಹಿರಿಯರಾದ ಶ್ಯಾಮ ಭಟ್ ಕಲ್ಲಕಟ್ಟ, ನಾರಾಯಣ ಭಟ್ ಪಾಡಿ ಕಲ್ಲಕಟ್ಟ, ನಾರಾಯಣ ನಾಯ್ಕ ಶ್ರೀದೇವಿನಿಲಯ ಕೊಲ್ಲಂಗಾನ, ಭವಾನಿ ನಾರಾಯಣ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಸಮಿತಿ ಅಧ್ಯಕ್ಷ ಕೆ.ಶ್ರೀಶರಾಜ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ವಂದಿಸಿದರು. ರಕ್ಷಾಧಿಕಾರಿ ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಊರಪರವೂರ ಭಗವದ್ಭಕ್ತರು ಪಾಲ್ಗೊಂಡಿದ್ದರು.




.jpg)
.jpg)
