HEALTH TIPS

ವಿದ್ಯಾರ್ಥಿಗಳಲ್ಲಿ ಆತ್ಮನಿರ್ಭರತೆಯನ್ನು ಮೈಗೂಡಿಸಲು ಸ್ವದೇಶಿ ಮಾಡ್ಯೂಲ್ ಹೊರತಂದ ಎನ್‌ಸಿಇಆರ್‌ಟಿ!

ನವದೆಹಲಿ: ಎನ್‌ಸಿಇಆರ್‌ಟಿ ಶಾಲಾ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕಗಳಿಂದ ಪ್ರತ್ಯೇಕವಾದ ಎರಡು ವಿಶೇಷ ಮಾಡ್ಯೂಲ್(ಶೈಕ್ಷಣಿಕ ಅಧ್ಯಾಯಗಳ ಗುಚ್ಛ)ಗಳನ್ನು ಹೊರತಂದಿದೆ. ಇವು 'ವೋಕಲ್ ಫಾರ್ ಲೋಕಲ್' ಮತ್ತು ಸ್ವದೇಶಿ ಉತ್ಪನ್ನಗಳ ಖರೀದಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯನ್ನು ಕೇಂದ್ರೀಕರಿಸಿದ್ದು, ಸ್ವದೇಶಿ ಪರಿಕಲ್ಪನೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು indianexpress.com ವರದಿ ಮಾಡಿದೆ.

6ರಿಂದ 8ನೇ ತರಗತಿವರೆಗಿನ ಮತ್ತು 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಸ್ವದೇಶಿ ಕುರಿತು ಎರಡು ವಿಶೇಷ ಮಾಡ್ಯೂಲ್‌ಗಳನ್ನು ಎನ್‌ಸಿಇಆರ್‌ಟಿ ಬಿಡುಗಡೆಗೊಳಿಸಿದ್ದು,ಇವು ಆಪರೇಷನ್ ಸಿಂಧೂರ,ವಿಭಜನೆಯ ಭಯಾನಕತೆಗಳು ಮತ್ತು ಸ್ವಚ್ಛತಾದಂತಹ ನಿರ್ದಿಷ್ಟ ವಿಷಯಗಳ ಕುರಿತು ಕಿರು ಪ್ರಕಟಣೆಗಳಾಗಿವೆ. ಪಠ್ಯಪುಸ್ತಕಗಳಿಂದ ಪ್ರತ್ಯೇಕವಾಗಿರುವ ಇವುಗಳನ್ನು ಶಾಲೆಗಳಲ್ಲಿ ಹೆಚ್ಚುವರಿ ಬೋಧನಾ ಸಾಮಗ್ರಿಗಳಾಗಿ ಬಳಸಬಹುದಾಗಿದೆ.

9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಇತ್ತೀಚಿಗೆ ಬಿಡುಗಡೆಗೊಂಡಿರುವ ಸ್ವದೇಶಿ ಕುರಿತು ಮಾಡ್ಯೂಲ್ ಈ ವರ್ಷದ ಸ್ವಾತಂತ್ರ್ಯದಿನದಂದು ಪ್ರಧಾನಿಯವರ ಭಾಷಣದಲ್ಲಿನ ಸ್ವಾವಲಂಬನೆ ಕುರಿತು ಭಾಗದೊಂದಿಗೆ ಆರಂಭವಾಗುತ್ತದೆ.

'ಸ್ವಾವಲಂಬನೆಯು ಕೇವಲ ಆಮದು ಮತ್ತು ರಫ್ತಿಗೆ ಅಥವಾ ರೂಪಾಯಿ,ಪೌಂಡ್ ಮತ್ತು ಡಾಲರ್‌ಗೆ ಸೀಮಿತವಾಗಿಲ್ಲ. ಅದು ವಿಶಾಲ ಅರ್ಥವನ್ನು ಹೊಂದಿದೆ. ಸ್ವಾವಲಂಬನೆಯು ನಮ್ಮ ಸಾಮರ್ಥ್ಯದೊಂದಿಗೆ ತಳುಕು ಹಾಕಿಕೊಂಡಿದೆ ಮತ್ತು ಸ್ವಾವಲಂಬನೆಯು ಕಡಿಮೆಯಾದಾಗ ಸಾಮರ್ಥ್ಯವೂ ನಿರಂತರವಾಗಿ ಕುಸಿಯುತ್ತದೆ. ಆದ್ದರಿಂದ ನಮ್ಮ ಸಾಮರ್ಥ್ಯವನ್ನು ಸಂರಕ್ಷಿಸಲು,ನಿರ್ವಹಿಸಲು ಮತ್ತು ಹೆಚ್ಚಿಸಿಕೊಳ್ಳಲು ಸ್ವಾವಲಂಬಿಯಾಗಿರುವುದು ಅನಿವಾರ್ಯವಾಗಿದೆ ' ಎಂದು ಪ್ರಧಾನಿ ಹೇಳಿದ್ದನ್ನು ಮಾಡ್ಯೂಲ್ ಉಲ್ಲೇಖಿಸಿದೆ.

ಸ್ವದೇಶಿ ಎಂದರೆ ನಮ್ಮ ದೇಶದಲ್ಲಿ ಉತ್ಪಾದಿತ ಸರಕುಗಳ ಬಳಕೆ ಮತ್ತು ಇತರರೂ ಅದನ್ನು ಮಾಡಲು ಪ್ರೋತ್ಸಾಹಿಸುವುದನ್ನು ಸೂಚಿಸುತ್ತದೆ. ಸ್ವದೇಶಿ ನಮ್ಮದೇ ಜನರ ಶಕ್ತಿ,ಸೃಜನಶೀಲತೆ ಮತ್ತು ಪ್ರತಿಭೆಯಲ್ಲಿ ನಂಬಿಕೆಯನ್ನಿರಿಸುವ ಕುರಿತಾಗಿದೆ ಮತ್ತು ಅದು ನಮ್ಮ ಪರಿಕಲ್ಪನೆಗಳು,ಆಲೋಚನೆಗಳು ಮತ್ತು ನವೀನತೆಗಳನ್ನು ಒಳಗೊಂಡಿದೆ ಎಂದು ಮಾಡ್ಯೂಲ್ ವಿವರಿಸಿದೆ.

ಮಾಡ್ಯೂಲ್ 1905ರಲ್ಲಿ ಬ್ರಿಟಿಷರು ಬಂಗಾಳವನ್ನು ವಿಭಜಿಸಿದಾಗ ಆರಂಭಗೊಂಡಿದ್ದ ಸ್ವದೇಶಿ ಚಳುವಳಿಯನ್ನು ಉಲ್ಲೇಖಿಸಿದೆ. ಸ್ವದೇಶಿ ಕುರಿತು ಮಹಾತ್ಮಾ ಗಾಂಧಿ,ರವೀಂದ್ರನಾಥ ಟಾಗೋರ್, ಬಾಲಗಂಗಾಧರ ಟಿಳಕ್,‌ ದೀನದಯಾಳ ಉಪಾಧ್ಯಾಯ ಅವರ ಹೇಳಿಕೆಗಳನ್ನು ಮಾಡ್ಯೂಲ್ ಉಲ್ಲೇಖಿಸಿದೆ.

ಜಾಗತೀಕರಣವು ಮಾರುಕಟ್ಟೆಗಳನ್ನು ಪರಸ್ಪರ ಸಂಪರ್ಕಿಸಿದೆ ಮತ್ತು ಅವಕಾಶಗಳನ್ನು ಹೆಚ್ಚಿಸಿದೆ. ಇದೇ ವೇಳೆ ಅದು ದೇಶಗಳನ್ನು ತೈಲಬೆಲೆ ಏರಿಕೆ,ಸಾಂಕ್ರಾಮಿಕ ರೋಗಗಳು ಅಥವಾ ವ್ಯಾಪಾರ ವಿವಾದಗಳಂತಹ ವಿದೇಶಿ ಆಘಾತಗಳಿಗೂ ಗುರಿಯಾಗಿಸುತ್ತದೆ. ಬಾಹ್ಯಶಕ್ತಿಗಳ ಮೇಲೆ ನಾವು ಹೆಚ್ಚು ಅವಲಂಬಿತರಾಗದಂತೆ ಪ್ರಬಲ ಸ್ಥಳೀಯ ಉದ್ಯಮಗಳೊಂದಿಗೆ ಜಾಗತಿಕ ವ್ಯಾಪಾರವನ್ನು ಸಮತೋಲನಗೊಳಿಸುವಂತೆ ಸ್ವದೇಶಿ ನಮಗೆ ನೆನಪಿಸುತ್ತದೆ ಎಂದು ಹೇಳಿರುವ ಮಾಡ್ಯೂಲ್, ವ್ಯೂಹಾತ್ಮಕ ಸ್ವಾವಲಂಬನೆಯ ಶಕ್ತಿಯನ್ನು ಪ್ರದರ್ಶಿಸಿರುವ ಇಸ್ರೇಲ್, ವಿಯೆಟ್ನಾಂ, ದಕ್ಷಿಣ ಕೊರಿಯಾ ಮತು ಸಿಂಗಾಪುರದಂತಹ ದೇಶಗಳನ್ನು ಬೆಟ್ಟು ಮಾಡಿದೆ.

ಭಾರತದ ಆರ್ಥಿಕ ಬೆಳವಣಿಗೆ ನಿಧಾನಗೊಂಡಿದ್ದಾಗ ಮತ್ತು ದೇಶವು ತನ್ನ ಅಭಿವೃದ್ಧಿಯನ್ನು ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಸವಾಲುಗಳನ್ನು ಎದುರಿಸುತ್ತಿದ್ದಾಗ ಆರಂಭಿಸಲಾಗಿದ್ದ 'ಮೇಕ್ ಇನ್ ಇಂಡಿಯಾ' ಉಪಕ್ರಮದಡಿ ಸ್ಟಾರ್ಟ್‌ಅಪ್ ಇಂಡಿಯಾ,ಡಿಜಿಟಲ್ ಇಂಡಿಯಾ,ವೋಕಲ್ ಫಾರ್ ಲೋಕಲ್,ಆತ್ಮನಿರ್ಭರ ಭಾರತ ಇತ್ಯಾದಿಗಳನ್ನೂ ಮಾಡ್ಯೂಲ್ ಒಳಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries