ಜಿನೆವಾ: ಗಾಝಾ ಕದನ ವಿರಾಮವನ್ನು ಉಳಿಸಿಕೊಳ್ಳುವುದು ಭೂಪ್ರದೇಶಕ್ಕೆ ಜೀವ ಉಳಿಸುವ ಮಾನವೀಯ ಸಹಾಯವನ್ನು ತಲುಪಿಸಲು ನಿರ್ಣಾಯಕವಾಗಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದ್ದು ಗಾಝಾಕ್ಕೆ ಪ್ರವೇಶ ಕಲ್ಪಿಸುವ ಎಲ್ಲಾ ಕ್ರಾಸಿಂಗ್(ಗಡಿ ದಾಟು)ಗಳನ್ನೂ ತಕ್ಷಣ ತೆರೆಯುವಂತೆ ಆಗ್ರಹಿಸಿದೆ.
ಕದನ ವಿರಾಮವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಇದು ನಿಜವಾಗಿಯೂ ಜೀವಗಳನ್ನು ಉಳಿಸುವ ಏಕೈಕ ಮಾರ್ಗವಾಗಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆ(ಡಬ್ಲ್ಯೂಎಫ್‍ಪಿ)ಯ ಮಧ್ಯಪ್ರಾಚ್ಯ ವಕ್ತಾರೆ ಅಬೀರ್ ಎತೆಫಾ ಜಿನೆವಾದಲ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಇದು ಅಸ್ಥಿರ ಕದನ ವಿರಾಮವೆಂದು ನಮಗೆ ತಿಳಿದಿದೆ. ಇದು ಮುಂದುವರಿಯುವುದು ಅತ್ಯಂತ ಮಹತ್ವದ ವಿಷಯವಾಗಿದೆ. ಕದನ ವಿರಾಮ ಜಾರಿಗೆ ಬಂದಂದಿನಿಂದ ಡಬ್ಲ್ಯೂಎಫ್‍ಪಿಯ 530 ಟ್ರಕ್‍ಗಳು ಗಾಝಾ ಪ್ರವೇಶಿಸಿದ್ದು 6,700ಕ್ಕೂ ಅಧಿಕ ಟನ್‍ಗಳಷ್ಟು ಆಹಾರವನ್ನು ಪೂರೈಸಿದೆ. ಇದು ಸುಮಾರು 5 ಲಕ್ಷ ಜನರಿಗೆ ಎರಡು ವಾರಗಳಿಗೆ ಸಾಕಾಗುತ್ತದೆ. ಟ್ರಕ್‍ಗಳು ಸಾಗಿ ಬರುತ್ತಿದ್ದು ಆಹಾರಗಳು ಗೋದಾಮನ್ನು ತಲುಪುತ್ತಿವೆ ಮತ್ತು ವಿತರಣೆಗಳು ಸಂಘಟಿತ ಮತ್ತು ಗೌರವಯುತ ರೀತಿಯಲ್ಲಿ ನಡೆಯುತ್ತಿವೆ. ಕದನ ವಿರಾಮದ ಬಳಿಕ ಡಬ್ಲ್ಯೂಎಫ್‍ಪಿ ಟ್ರಕ್‍ಗಳಿಂದ ಆಹಾರವನ್ನು ಲೂಟಿ ಮಾಡುವ ಘಟನೆ ನಡೆದಿಲ್ಲ ' ಎಂದು ಹೇಳಿದ್ದಾರೆ.
ಮೂರು ದಿನಗಳ ಹಿಂದೆ ಗಾಝಾದಲ್ಲಿ ಡಬ್ಲ್ಯೂಎಫ್‍ಪಿ 5 ಆಹಾರ ವಿತರಣಾ ಕೇಂದ್ರಗಳನ್ನು ಹೊಂದಿದ್ದರೆ ಈಗ 26ಕ್ಕೆ ಏರಿದೆ. ಆದರೆ ಗಾಝಾ ಪಟ್ಟಿಯಾದ್ಯಂತ ಸಮರ್ಪಕ ರೀತಿಯಲ್ಲಿ ಆಹಾರ ನೆರವು ವಿತರಿಸಬೇಕಿದ್ದರೆ 145 ಕೇಂದ್ರಗಳ ಅಗತ್ಯವಿದೆ. ಆಹಾರ ನೆರವು ಬಯಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆರೆಮ್ ಶಲೋಮ್ ಮತ್ತು ಕಿಸ್ಸುಫಿಮ್ ಗಡಿದಾಟುಗಳನ್ನು ಮಾತ್ರ ತೆರೆಯಲಾಗಿದೆ. ಆದರೆ ಗಾಝಾದಾದ್ಯಂತ, ವಿಶೇಷವಾಗಿ ಉತ್ತರ ಗಾಝಾಕ್ಕೆ ಸಮರ್ಪಕವಾಗಿ ಆಹಾರ ನೆರವು ತಲುಪಿಸಬೇಕಿದ್ದರೆ ಎಲ್ಲಾ ಪ್ರವೇಶ ದ್ವಾರಗಳನ್ನೂ ತಕ್ಷಣ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.
ಯುದ್ಧಪೀಡಿತ ನಾಗರಿಕರಿಗೆ ನಿರ್ಣಾಯಕ ಸಹಾಯವನ್ನು ಅನುಮತಿಸಲು ಗಾಝಾಕ್ಕೆ ನೆರವು ಪೂರೈಕೆ ಮಾರ್ಗವನ್ನು ತುರ್ತು ಆದ್ಯತೆಯ ಮೇರೆಗೆ ತಕ್ಷಣವೇ ತೆರೆಯಬೇಕಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಕೂಡ ಆಗ್ರಹಿಸಿದ್ದಾರೆ.




