HEALTH TIPS

ಸುಪ್ರೀಂ ಕೋರ್ಟ್‌ಗೆ ನೂತನ CJI ನೇಮಕ: ಬುಡ್ಡಿ ದೀಪದ ಬೆಳಕಲ್ಲಿ ಅರಳಿದ 'ಸೂರ್ಯ'

ನವದೆಹಲಿ: ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಗುರುವಾರ ನೇಮಕಗೊಂಡಿದ್ದಾರೆ.

ನ. 24ರಂದು ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನ್ಯಾಯಮೂರ್ತಿ ಸೂರ್ಯಕಾಂತ್‌ ಅವರ ಹೆಸರನ್ನು ಸಿಜೆಐ ಬಿ.ಆರ್‌. ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.

ಈ ಬಗ್ಗೆ ಕೇಂದ್ರ ಕಾನೂನು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಸಿಜೆಐ ಬಿ.ಆರ್‌. ಗವಾಯಿ ಅವರು ನ.23ರಂದು ನಿವೃತ್ತಿಯಾಗುತ್ತಿದ್ದಾರೆ. 2027ರ ಫೆಬ್ರುವರಿ 9ರವರೆಗೆ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಸಿಜೆಐ ಆಗಿ ಮುಂದುವರಿಯಲಿದ್ದಾರೆ. ಹರಿಯಾಣದ ನ್ಯಾಯಮೂರ್ತಿಯೊಬ್ಬರು ಇದೇ ಮೊದಲ ಬಾರಿಗೆ ಸರ್ವೋಚ್ಛ ನ್ಯಾಯಾಲಯದ ಹುದ್ದೆಗೆ ಏರಿದ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.

ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಹರಿಯಾಣದ ಹಿಸ್ಸಾರ್‌ನ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದವರು. ಎಸ್ಸೆಸ್ಸೆಲ್ಸಿವರೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ.

ಹಳ್ಳಿಯ ಶಿಕ್ಷಕರೊಬ್ಬರ ಪುತ್ರರಾಗಿರುವ ಸೂರ್ಯ ಕಾಂತ್, ಮೊದಲ ಬಾರಿಗೆ ಸಣ್ಣ ಪಟ್ಟಣವೊಂದನ್ನು ನೋಡಿದ್ದು ಎಸ್ಸೆಸ್ಸೆಲ್ಸಿಯಲ್ಲಿ ಇದ್ದಾಗ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಸಲುವಾಗಿ ಹಿಸ್ಸಾರ್‌ನ ಹನ್ಸಿ ಪಟ್ಟಣಕ್ಕೆ ಪ್ರಯಾಣ ಬೆಳೆಸಿದ್ದರು.

'ನನ್ನ ಶಾಲಾ ಶಿಕ್ಷಣ ಸರ್ಕಾರಿ ಶಾಲೆಯಲ್ಲೇ ಆಗಿತ್ತು. ಶಾಲೆ ಬಿಟ್ಟ ನಂತರ ಬಿಡುವಿನ ಅವಧಿಯಲ್ಲಿ ಗದ್ದೆಗಳಲ್ಲಿ ದುಡಿಯುತ್ತಿದ್ದೆ' ಎಂದು ಅವರು ಇತ್ತೀಚೆಗೆ ನೆನಪಿಸಿಕೊಂಡಿದ್ದರು. ಕೃಷಿ ಕ್ಷೇತ್ರದಲ್ಲಿ ಗ್ರಾಮಸ್ಥರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರಿಂದ ಜೀವನದ ಬಗ್ಗೆ ಅನೇಕ ಪಾಠಗಳನ್ನು ಕಲಿಯಲು ಸಾಧ್ಯವಾಯಿತು' ಎಂದು ಅವರು ಹೇಳಿಕೊಂಡಿದ್ದರು.

ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಕೆಲ ಸಮಯದ ಹಿಂದೆ ಉಪನ್ಯಾಸ ನೀಡಿದ್ದ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಹಳ್ಳಿಯ ಕಷ್ಟದ ಜೀವನದ ಬಗ್ಗೆ ತಿಳಿಸಿದ್ದರು.

'ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದ ಹಳ್ಳಿಯ ಶಾಲೆಯಲ್ಲಿ ಸರಿಯಾದ ಬೆಂಚುಗಳೇ ಇರಲಿಲ್ಲ. ಗ್ರಾಮದಲ್ಲಿ ವಿದ್ಯುತ್ ಸೌಲಭ್ಯವೂ ಸಮರ್ಪಕ ಆಗಿರಲಿಲ್ಲ. ಬುಡ್ಡಿ ದೀಪದ ಬೆಳಕಿನಲ್ಲಿ ಗೆಳೆಯರ ಜತೆಗೂಡಿ ಅಧ್ಯಯನ ನಡೆಸುತ್ತಿದ್ದೆ. ಸರ್ಕಾರಿ ಉದ್ಯೋಗ ಪಡೆಯುವುದೇ ನಮ್ಮೆಲ್ಲರ ಗುರಿಯಾಗಿತ್ತು' ಎಂದು ನೆನಪಿಸಿಕೊಂಡಿದ್ದರು.

ನ್ಯಾ. ಸೂರ್ಯಕಾಂತ್ ಪರಿಚಯ

  • ಹಿಸ್ಸಾರ್‌ ಜಿಲ್ಲೆಯ ಪೆಟ್ವಾರ್ ಗ್ರಾಮದಲ್ಲಿ 1962ರ ಫೆಬ್ರುವರಿ 10ರಂದು ಜನನ

  • ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ 1984ರಲ್ಲಿ ಎಲ್‌ಎಲ್‌ಬಿ ಪದವಿ

  • ಆರಂಭದಲ್ಲಿ ಹಿಸ್ಸಾರ್‌ನ ನ್ಯಾಯಾಲಯದಲ್ಲಿ ವಕೀಲಿಕೆ. ಬಳಿಕ ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ

  • 38ನೇ ವಯಸ್ಸಿನಲ್ಲೇ ಹರಿಯಾಣದ ಅಡ್ವೊಕೇಟ್‌ ಜನರಲ್ ಆಗಿ ಕಾರ್ಯನಿರ್ವಹಣೆ

  • 42ನೇ ವಯಸ್ಸಿನಲ್ಲಿ ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ. ಅಲ್ಲಿ 14 ವರ್ಷಗಳ ಸೇವೆ

  • 2018ರ ಅಕ್ಟೋಬರ್‌ 5ರಂದು ಹಿಮಾಚಲ ಪ್ರದೇಶ ಹೈಕೋರ್ಟ್‌ ಮುಖ್ಯನ ನ್ಯಾಯಮೂರ್ತಿಯಾಗಿ ಪದೋನ್ನತಿ

  • 2019ರ ಮೇ 4ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ

ಪ್ರಮುಖ ತೀರ್ಪುಗಳು

  • ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಇವುಗಳಲ್ಲಿ ವಾಕ್‌ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಭ್ರಷ್ಟಾಚಾರ ಪರಿಸರ ಹಾಗೂ ಲಿಂಗ ಸಮಾನತೆಯ ಪ್ರಕರಣಗಳು ಸೇರಿವೆ.

  • ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್‌ ಪೀಠದ ಭಾಗವಾಗಿದ್ದರು. ವಸಾಹತು ಯುಗದ ದೇಶದ್ರೋಹಿ ಕಾನೂನಿಗೆ ತಡೆ ನೀಡಿದ್ದ ಪೀಠದಲ್ಲಿದ್ದರು.

  • ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಸಮಯದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾದ 65 ಲಕ್ಷ ಹೆಸರುಗಳ ವಿವರಗಳನ್ನು ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದರು.

  • ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಸೇರಿದಂತೆ ಬಾರ್ ಅಸೋಸಿಯೇಷನ್‌ಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ನಿರ್ದೇಶಿಸಿದ ಕೀರ್ತಿಯೂ ನ್ಯಾ. ಸೂರ್ಯಕಾಂತ್ ಅವರಿಗೆ ಸಲ್ಲುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries