HEALTH TIPS

Cough Syrup Row: ಗುಣಮಟ್ಟ ತಪಾಸಣೆ: ರಾಷ್ಟ್ರವ್ಯಾಪಿ ಅಭಿಯಾನ

ನವದೆಹಲಿ: ಕೆಮ್ಮಿನ ಸಿರಪ್‌ಗಳ ಪರೀಕ್ಷೆ ಹಾಗೂ ಅವುಗಳ ತಯಾರಕರ ಕುರಿತು ರಾಷ್ಟ್ರವ್ಯಾಪಿ ತಪಾಸಣೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಮುಂದಾಗಿದೆ ಎಂದು ಮೂಲಗಳು ಗುರುವಾರ ಹೇಳಿವೆ.

ಕೆಮ್ಮಿನ ಸಿರಪ್‌ ತಯಾರಕ ಕಂಪನಿಗಳ ಪಟ್ಟಿಯನ್ನು ಒದಗಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಿಡಿಎಸ್‌ಸಿಒ ಸೂಚನೆಯನ್ಣೂ ನೀಡಿದೆ.

'ಕಲುಷಿತ' ಕೆಮ್ಮಿನ ಸಿರಪ್‌ ಸೇವನೆಯಿಂದ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸಾವು ಸಂಭವಿಸಿರುವ ಬಗ್ಗೆ ಆರೋಪಗಳು ಕೇಳಿಬಂದ ಕಾರಣ, ಸಿಡಿಎಸ್‌ಸಿಒ ಈ ಅಭಿಯಾನ ಕೈಗೊಂಡಿದೆ.

ಸೂಚನೆ ನೀಡಿದ್ದ ಡಿಸಿಜಿಐ: 'ಕಲುಷಿತ' ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳು ಮೃತಪಟ್ಟಿರುವ ಆರೋಪಗಳು ಕೇಳಿ ಬಂದ ಬೆನ್ನಲ್ಲೇ, ಭಾರತೀಯ ಔಷಧ ಮಹಾನಿಯಂತ್ರಕ (ಡಿಸಿಜಿಐ) ಸಂಸ್ಥೆಯು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಬುಧವಾರ ಕೆಲವು ಸೂಚನೆಗಳನ್ನು ನೀಡಿತ್ತು.

'ಔಷಧೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೂ ಮುನ್ನ, ಅವುಗಳ ತಯಾರಿಕೆಗೆ ಬಳಸುವ ಕಚ್ಚಾಪದಾರ್ಥಗಳ ಪರಿಶೀಲನೆ ಹಾಗೂ ತಯಾರಿಕೆ ವೇಳೆ ನಿರ್ದಿಷ್ಟ ಪ್ರಕ್ರಿಯೆ ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು' ಎಂದು ಡಿಸಿಜಿಐ ಸೂಚನೆ ನೀಡಿತ್ತು.

'ಕೆಲ ಕಂಪನಿಗಳು ಕೆಮ್ಮಿನ ಸಿರಪ್‌ ತಯಾರಿಸುವ ವೇಳೆ, ಸಿರಪ್‌ನ ಪ್ರತಿ ಬ್ಯಾಚ್‌ಗೆ ಸಂಬಂಧಿಸಿ ಬಳಸುವ ರಾಸಾಯನಿಕ ಪದಾರ್ಥಗಳ ಪರೀಕ್ಷೆ ನಡೆಸದಿರುವುದು ತಪಾಸಣೆ ವೇಳೆ ಕಂಡುಬಂದಿದೆ' ಎಂದೂ ಹೇಳಿತ್ತು.

ಮೋಹನ್ ಯಾದವ್ ಮಧ್ಯಪ್ರದೇಶ ಮುಖ್ಯಮಂತ್ರಿಮಕ್ಕಳ ಸಾವುಗಳ ವಿಚಾರವಾಗಿ ಕಾಂಗ್ರೆಸ್‌ ಪಕ್ಷ ಟೀಕೆ ಮಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ರಾಹುಲ್‌ ಗಾಂಧಿ ಅವರು ತಮಿಳುನಾಡಿಗೆ ಹೋಗಿ ಖುದ್ದಾಗಿ ಪರಿಶೀಲಿಸಲಿ. ಅಲ್ಲಿನ ಸರ್ಕಾರದ ವಿರುದ್ಧ ಪ್ರತಿಭಟಿಸಲಿ

ಮತ್ತಿಬ್ಬರು ಮಕ್ಕಳ ಸಾವು: ಮೃತರ ಸಂಖ್ಯೆ 22ಕ್ಕೆ ಏರಿಕೆ

ಛಿಂದ್ವಾಢ(ಮಧ್ಯಪ್ರದೇಶ): 'ಕಲುಷಿತ' ಕೆಮ್ಮಿನ ಸಿರಪ್‌ ಸೇವಿಸಿದ್ದರಿಂದ ಮೂತ್ರಪಿಂಡ ಸೋಂಕು ಕಾಣಿಸಿಕೊಂಡು ರಾಜ್ಯದ ಇಬ್ಬರು ಮಕ್ಕಳು ನಾಗ್ಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ಧಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಇದರೊಂದಿಗೆ ಕೆಮ್ಮಿನ ಸಿರಪ್‌ ಸೇವನೆ ಜೊತೆ ನಂಟಿನ ಮಕ್ಕಳ ಸಾವಿನ ಸಂಖ್ಯೆ 22ಕ್ಕೆ ಏರಿದಂತಾಗಿದೆ. ಬುಧವಾರ ಸಂಜೆ ವಿಶಾಲ್‌(5) ಹಾಗೂ ತಡರಾತ್ರಿ ಮಯಂಕ್ ಸೂರ್ಯವಂಶಿ (4) ಮೃತಪಟ್ಟರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಧೀರೇಂದ್ರ ಸಿಂಗ್‌ ನೇತ್ರಿ ಹೇಳಿದ್ದಾರೆ. ಮೃತ ಮಕ್ಕಳು ಛಿಂದ್ವಾಢ ಜಿಲ್ಲೆ ಪರಾಸಿಯಾ ಪಟ್ಟಣದವರಾಗಿದ್ದರು.

ರಂಗನಾಥನ್‌ ಬಂಧನ

'ಕೋಲ್ಡ್ರಿಫ್‌' ಕೆಮ್ಮಿನ ಸಿರಪ್‌ ತಯಾರಿಸುವ ಕಂಪನಿ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ ಕಂಪನಿ ಮಾಲೀಕ ಡಾ.ಜಿ.ರಂಗನಾಥನ್‌ ಅವರನ್ನು ಮಧ್ಯಪ್ರದೇಶ ಪೊಲೀಸರು ಚೆನ್ನೈನಲ್ಲಿ ಗುರುವಾರ ನಸುಕಿನಲ್ಲಿ ಬಂಧಿಸಿದ್ದಾರೆ. ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮೋಹನ್ ಯಾದವ್‌ ರಂಗನಾಥನ್‌ ಅವರ ಬಂಧನವನ್ನು ಖಚಿತಪಡಿಸಿದರು. 'ರಂಗನಾಥನ್‌ ಅವರನ್ನು ಚೆನ್ನೈನ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಗುವುದು. ಟ್ರಾನ್ಸಿಟ್‌ ರಿಮ್ಯಾಂಡ್‌ ಪಡೆದು ಪರಾಸಿಯಾಕ್ಕೆ ಕರೆದಕೊಂಡು ಬರಲಾಗುವುದು' ಎಂದು ಡಿಎಸ್‌ಪಿ ಜಿತೇಂದ್ರ ಸಿಂಗ್ ಜಾಟ್‌ ಹೇಳಿದ್ದಾರೆ. ಅಲ್ಲದೇ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ ಕಾರ್ಖಾನೆಯಲ್ಲಿ ಕೆಲ ದಾಖಲೆಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

'ತನಿಖೆ: ತಮಿಳುನಾಡು ಸರ್ಕಾರ ಸಹಕರಿಸುತ್ತಿಲ್ಲ'

ಭೋಪಾಲ್‌/ನಾಗ್ಪುರ: ಕೆಮ್ಮಿನ ಸಿರಪ್‌ ಸೇವಿಸಿ 22 ಮಕ್ಕಳ ಮೃತಪಟ್ಟಿರುವ ಕುರಿತು ಮಧ್ಯಪ್ರದೇಶ ಸರ್ಕಾರ ಕೈಗೊಂಡಿರುವ ತನಿಖೆಗೆ ತಮಿಳುನಾಡು ಸರ್ಕಾರ ಸಹಕರಿಸುತ್ತಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದರು. ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಕೋಲ್ಡ್ರಿಫ್‌ ಕೆಮ್ಮಿನ ಸಿರಪ್‌ಗೆ ಸಂಬಂಧಿಸಿ ತಮಿಳುನಾಡಿನ ಔಷಧ ನಿಯಂತ್ರಕರು ಸಮರ್ಪಕ ವರದಿ ಸಲ್ಲಿಸುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ' ಎಂದರು.

'ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ': ನಾಗ್ಪುರಕ್ಕೆ ತೆರಳುವ ಮುನ್ನ ಭೋಪಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮೋಹನ್‌ ಯಾದವ್‌ 'ಕಲುಷಿತಗೊಂಡಿತ್ತು ಎನ್ನಲಾದ ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ' ಎಂದರು. . ಭೇಟಿ: ನಾಗ್ಪುರದ ಎಐಐಎಂಎಸ್‌ ನ್ಯೂ ಹೆಲ್ತ್ ಸಿಟಿ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿದ ಯಾದವ್‌ ನಂತರ ಕುಟುಂಬಸ್ಥರೊಂದಿಗೆ ಮಾತನಾಡಿ ಧೈರ್ಯ ಹೇಳಿದರು.

ಗುರುತಿಸಲಾಗಿರುವ ಲೋಪಗಳು?

* ಔಷಧೀಯ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿ 'ಪರಿಹಾರಾತ್ಮಕ ಮತ್ತು ನಿಯಂತ್ರಣ ಕ್ರಿಯಾಯೋಜನೆ(ಸಿಎಪಿಎ) ಅಡಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಆದರೆ ಯಾವ ರಾಜ್ಯವೂ ಈ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ

* ಔಷಧೀಯ ಉತ್ಪನ್ನಗಳ ತಯಾರಿಕೆಗೆ ಪರವಾನಗಿ ನೀಡುವ ಮತ್ತು ನಿಯಂತ್ರಣವನ್ನು ಶಿಸ್ತುಬದ್ಧಗೊಳಿಸಲು 'ನ್ಯಾಷನಲ್ ಡ್ರಗ್ಸ್‌ ಲೈಸೆನ್ಸಿಂಗ್‌ ಸಿಸ್ಟಮ್‌'(ಒಎನ್‌ಡಿಎಲ್‌ಎಸ್‌) ಅನ್ನು ರೂಪಿಸಲಾಗಿದೆ. ಈ ವರೆಗೆ 18 ರಾಜ್ಯಗಳ ಔಷಧ ನಿಯಂತ್ರಣ ಪ್ರಾಧಿಕಾರಗಳು ಮಾತ್ರ ಈ ವ್ಯವಸ್ಥೆಯನ್ನು ಅನುಸರಿಸುತ್ತಿವೆ

ಕೆಮ್ಮಿನ ಮೂರು ಸಿರಪ್ ತಯಾರಿಕೆ ಸ್ಥಗಿತಕ್ಕೆ ಆದೇಶ

ನವದೆಹಲಿ: ಕೋಲ್ಡ್ರಿಫ್‌ ರೆಸ್ಪಿಫ್ರೆಶ್‌ ಟಿಆರ್‌ ಹಾಗೂ ರಿಲೈಫ್‌ ಕೆಮ್ಮಿನ ಸಿರಪ್‌ಗಳನ್ನು ಮಾರುಕಟ್ಟೆಗಳಿಂದ ವಾಪಸು ತರಿಸಿಕೊಳ್ಳಲಾಗಿದೆ ಹಾಗೂ ಈ ಸಿರಪ್‌ಗಳ ತಯಾರಿಕೆಯನ್ನು ನಿಲ್ಲಿಸುವಂತೆ ಸಂಬಂಧಿಸಿದ ಕಂಪನಿಗಳಿಗೆ ಆದೇಶಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲುಎಚ್‌ಒ) ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ತಿಳಿಸಿದೆ.

ಇವುಗಳ ಪೈಕಿ ಯಾವ ಸಿರಪ್‌ಅನ್ನು ಕೂಡ ಇತರ ದೇಶಗಳಿಗೆ ರಫ್ತು ಮಾಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಸಿಡಿಎಸ್‌ಸಿಒ ಬುಧವಾರ ತಿಳಿಸಿದೆ. ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೆಮ್ಮಿನ ಸಿರಪ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆಯೇ ಎಂಬ ಮಾಹಿತಿ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಭಾರತಕ್ಕೆ ಸೂಚಿಸಿತ್ತು. ಹೀಗಾಗಿ ಈ ಮಾಹಿತಿ ಒದಗಿಸಲಾಗಿದೆ ಎಂದು ಮೂಲಗಳು ಹೇಳಿವೆ. ಮಧ್ಯಪ್ರದೇಸ ಹಾಗೂ ರಾಜಸ್ಥಾನದಲ್ಲಿ ಸಂಭವಿಸಿದ ಮಕ್ಕಳ ಸಾವುಗಳ ಕುರಿತು ಇತ್ತೀಚಿಗೆ ಭಾರತದ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಹೀಗಾಗಿ ಈ ಕುರಿತು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದೂ ಡಬ್ಲುಎಚ್‌ಒ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries