ಕರ್ನೂಲ್: ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಬಸ್ ಬೆಂಕಿ ಅಪಘಾತದಲ್ಲಿ ಸುಟ್ಟು ಕರಕಲಾದ ದೇಹಗಳ ಡಿಎನ್‌ಎ ಪರೀಕ್ಷೆಯು ಪೂರ್ಣಗೊಂಡಿದೆ. ಸಂತ್ರಸ್ತರ ಕುಟುಂಬಗಳಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಸುಟ್ಟು ಕರಕಲಾದ ದೇಹಗಳ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ, ವಿಜಯವಾಡದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನಿಸುವವರೆಗೂ ಸಂರಕ್ಷಣೆಗಾಗಿ ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲಾಗಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಡಿಎನ್‌ಎ ಪರೀಕ್ಷೆ ಪೂರ್ಣಗೊಂಡ ನಂತರ ಎಲ್ಲಾ 19 ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ಬಿಹಾರ ಮತ್ತು ತಮಿಳುನಾಡಿನ ಸಂತ್ರಸ್ತರ ಕುಟುಂಬದ ಸದಸ್ಯರು ಮೃತದೇಹಗಳನ್ನು ಆಂಧ್ರಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ ಎಂದು ಕರ್ನೂಲ್ ಜಿಲ್ಲಾ ಕಂದಾಯ ವಿಭಾಗೀಯ ಅಧಿಕಾರಿ ಸಂದೀಪ್ ಕುಮಾರ್ ತಿಳಿಸಿದ್ದಾರೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಎ.ಸಿ. ಸ್ಲೀಪರ್ ಬಸ್‌ಗೆ ಬೆಂಕಿ ಹತ್ತಿಕೊಂಡು 19 ಮಂದಿ ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಬೈಕ್ ಸವಾರ ಮದ್ಯಪಾನ ಮಾಡಿ, ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂಬುದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಟ್ಟಿದೆ.
ಬಸ್ಸು ಕರ್ನೂಲ್ ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿತ್ತು. ಘಟನೆಯಲ್ಲಿ ಬಸ್‌ನಲ್ಲಿದ್ದ 44 ಜನರ ಪೈಕಿ 19 ಜನರು ಸಜೀವ ದಹನಗೊಂಡಿದ್ದರು. ಬೈಕ್ ಸವಾರನು ಮೃತಪಟ್ಟಿದ್ದನು.

