HEALTH TIPS

ಸುಡಾನ್ ನಲ್ಲಿ ನರಮೇಧ | ಅಲ್-ಫಶರ್ ನಲ್ಲಿ RSF ದಾಳಿ, ಮೂರು ದಿನಗಳಲ್ಲಿ 1,500 ಕ್ಕೂ ಹೆಚ್ಚು ನಾಗರಿಕರ ಹತ್ಯೆ

ಖಾರ್ಟೌಮ್: ಸುಡಾನ್ ನ ಪಶ್ಚಿಮ ಡಾರ್ಫರ್ ಪ್ರದೇಶದ ಎಲ್-ಫಶರ್ ನಗರದಲ್ಲಿ ನಡೆದ ರಕ್ತಪಾತ ವಿಶ್ವವನ್ನು ಬೆಚ್ಚಿಬೀಳಿಸಿದೆ. ರ‍್ಯಾಪಿಡ್ ಸಪೋರ್ಟ್ ಫೋರ್ಸಸ್ (RSF) ಪಡೆಗಳು ನಗರವನ್ನು ವಶಪಡಿಸಿಕೊಂಡ ನಂತರ ಕಳೆದ ಮೂರು ದಿನಗಳಲ್ಲಿ ಕನಿಷ್ಠ 1,500 ನಾಗರಿಕರನ್ನು ಹತ್ಯೆ ಮಾಡಿರುವುದಾಗಿ ವೈದ್ಯಕೀಯ ಮೂಲಗಳು ಮತ್ತು ಮಾನವ ಹಕ್ಕು ಸಂಘಟನೆಗಳು ವರದಿ ಮಾಡಿವೆ.

ದೇಶದ ನಿಯಂತ್ರಣಕ್ಕಾಗಿ ಸುಡಾನ್ ಸೈನ್ಯದೊಂದಿಗೆ ಹೋರಾಟ ನಡೆಸುತ್ತಿರುವ RSF, ನಗರದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದ ನಾಗರಿಕರ ಮೇಲೆ ಗುಂಡು ಹಾರಿಸಿದ್ದು, ಅನೇಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸುಡಾನ್ ಡಾಕ್ಟರ್ಸ್ ನೆಟ್ವರ್ಕ್ ಮಾಹಿತಿ ನೀಡಿದೆ.

"ಅಲ್-ಫಶರ್ ನಲ್ಲಿ ನಡೆಯುತ್ತಿರುವುದು ನಿಜವಾದ ನರಮೇಧ. ಇದು ಮಾನವೀಯತೆಯ ವಿರುದ್ಧದ ಅಪರಾಧ," ಎಂದು ಡಾಕ್ಟರ್ಸ್ ನೆಟ್ವರ್ಕ್ ಖಂಡಿಸಿದೆ.

ಕಳೆದ ಒಂದೂವರೆ ವರ್ಷಗಳ ಹಿಂದೆ ಇದೇ ನಗರದಲ್ಲಿ ಬಾಂಬ್ ದಾಳಿ, ಹಸಿವು ಮತ್ತು ಕಾನೂನುಬಾಹಿರ ಮರಣದಂಡನೆಗಳಿಂದ 14,000 ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದರು. ಈಗ ನಡೆಯುತ್ತಿರುವ ಹತ್ಯಾಕಾಂಡ ಅದರ ವಿಸ್ತೃತ ರೂಪ ಎಂದು ಅದು ಹೇಳಿದೆ.

ಯೇಲ್ ವಿಶ್ವವಿದ್ಯಾಲಯದ ಮಾನವೀಯ ಸಂಶೋಧನಾ ಪ್ರಯೋಗಾಲಯ (HRL) ಪ್ರಕಟಿಸಿದ ಉಪಗ್ರಹ ಚಿತ್ರಗಳಲ್ಲಿ, ನಗರ ಸುತ್ತಮುತ್ತ ಮಾನವ ದೇಹದ ಗಾತ್ರದ ವಸ್ತುಗಳ ಗುಂಪುಗಳು ಮತ್ತು ರಕ್ತದ ಗುರುತುಗಳಂತಹ ದೃಶ್ಯಗಳು ಪತ್ತೆಯಾಗಿವೆ.

►2,000 ಕ್ಕೂ ಹೆಚ್ಚು ಜನರ ಹತ್ಯೆಯ ಶಂಕೆ!

ಸುಡಾನ್ ಸರ್ಕಾರದ ಪ್ರಕಾರ, ರವಿವಾರದಿಂದ ಇಂದಿನವರೆಗೆ ಕೇವಲ ಮೂರು ದಿನಗಳಲ್ಲಿ ಅಲ್-ಫಶರ್ ನಲ್ಲಿ 2,000 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ನೆರವು ನೀಡಲು ಅಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಮರಣದಂಡನೆಗಳು, ಮನೆಮನೆಗೆ ದಾಳಿ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳಂತಹ ಅಮಾನುಷ ಕೃತ್ಯಗಳ ವರದಿಗಳನ್ನು ನೀಡಿವೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ಅಲ್-ಫಶರ್ ನ ಸೌದಿ ಆಸ್ಪತ್ರೆಯಲ್ಲಿ 460 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದಾರೆ. "ಈ ವರದಿಗಳು ದಿಗ್ಭ್ರಮೆಗೊಳಿಸುತ್ತಿವೆ. ಆಸ್ಪತ್ರೆಯೊಳಗೆ ರೋಗಿಗಳು ಮತ್ತು ಸಿಬ್ಬಂದಿಯನ್ನೇ ಹತ್ಯೆ ಮಾಡಿರುವುದು ಅಮಾನವೀಯ ಕ್ರೌರ್ಯ," ಎಂದು ಅವರು ಖಂಡಿಸಿದ್ದಾರೆ.

Aljazeera ವರದಿ ಪ್ರಕಾರ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ RSF ಯೋಧರು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ನಾಗರಿಕರ ಮೇಲೆ ಗುಂಡು ಹಾರಿಸುತ್ತಿರುವುದು ಹಾಗೂ ಆಸ್ಪತ್ರೆಯೊಳಗೆ ನುಗ್ಗಿ ರೋಗಿಗಳನ್ನು ಕೊಲ್ಲುತ್ತಿರುವುದು ಸೆರೆಯಾಗಿದೆ.

ಸೌದಿ ಅರೇಬಿಯಾ, ಈಜಿಪ್ಟ್, ಖತರ್, ತುರ್ಕಿಯಾ ಮತ್ತು ಜೋರ್ಡಾನ್ ದೇಶಗಳು ಈ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿವೆ.

ಸೌದಿ ಅರೇಬಿಯಾ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನಾಗರಿಕರನ್ನು ರಕ್ಷಿಸುವಂತೆ RSF ಪಡೆಗಳನ್ನು ಒತ್ತಾಯಿಸಿದೆ. ಈಜಿಪ್ಟ್ ತಕ್ಷಣದ ಮಾನವೀಯ ಒಪ್ಪಂದಕ್ಕೆ ಕರೆ ನೀಡಿದರೆ, ತುರ್ಕಿಯಾ ಮತ್ತು ಖತರ್ ಶಾಂತಿಯುತ ಪರಿಹಾರಕ್ಕಾಗಿ ಮಾತುಕತೆಗಳಿಗೆ ಒತ್ತಾಯಿಸಿವೆ.

ನರಮೇಧದ ಕುರಿತ ಆರೋಪಗಳಿಗೆ RSF ಇನ್ನೂ ಸ್ಪಷ್ಟನೆ ನೀಡಿಲ್ಲ. ಈ ಅರೆಸೈನಿಕ ಪಡೆಯು 2000ರ ದಶಕದಲ್ಲಿ ಡಾರ್ಫರ್ ನಲ್ಲಿ ನರಮೇಧ ನಡೆಸಿದ ಕುಖ್ಯಾತ ಸರಕಾರಿ ಪ್ರಾಯೋಜಿತ "ಜಂಜಾವೀಡ್" ಅರೆ ಸೈನಿಕ ಪಡೆಯಿಂದ ಹುಟ್ಟಿಕೊಂಡದ್ದು, ಎಂದು ವರದಿಗಳು ಹೇಳುತ್ತವೆ.

ಯೇಲ್ HRL ನಿರ್ದೇಶಕ ನಥಾನಿಯಲ್ ರೇಮಂಡ್, "ಅಲ್-ಫಶರ್ ನ ಹತ್ಯಾಕಾಂಡದ ಉಪಗ್ರಹ ಚಿತ್ರಣಗಳಲ್ಲಿ ನೂರಾರು ದೇಹಗಳು ಅಡ್ಡಲಾಗಿ ಬಿದ್ದಿರುವುದು ಸ್ಪಷ್ಟವಾಗಿ ಕಾಣುತ್ತಿದೆ," ಎಂದು ಹೇಳಿದ್ದಾರೆ.

"ಈ ಯುದ್ಧ ಕೇವಲ ಇಬ್ಬರು ಜನರಲ್ ಗಳ ನಡುವಿನ ಅಧಿಕಾರ ಹೋರಾಟವಲ್ಲ; ಇದು ಸುಡಾನ್ ನ ಅಪಾರ ಸಂಪನ್ಮೂಲಗಳು ಮತ್ತು ಭೌಗೋಳಿಕ ಪ್ರಾಬಲ್ಯಕ್ಕಾಗಿ ನಡೆಯುತ್ತಿರುವ ಅಂತರರಾಷ್ಟ್ರೀಯ ರಾಜಕೀಯ ಯುದ್ಧ," ಎಂದು ಸುಡಾನ್ ಸರ್ಕಾರದ ಮಾಜಿ ಅಧಿಕಾರಿಯಾದ ಅಹ್ಮದ್ ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ.

ಅಲ್-ಫಶರ್ ಪತನದೊಂದಿಗೆ RSF ಇದೀಗ ಡಾರ್ಫರ್ ಪ್ರದೇಶದ ಸಂಪೂರ್ಣ ನಿಯಂತ್ರಣ ಪಡೆದಿದೆ. ಇದು ಸುಡಾನ್ ಮತ್ತೆ ವಿಭಜನೆಯ ಅಂಚಿನಲ್ಲಿದೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries