ಪಾಟ್ನಾ: ರಾಜಕೀಯ ವಿರೋಧಿಗಳಿಂದ 'ಪಲ್ಟು ರಾಮ್' ಎಂಬ ಅಡ್ಡ ಹೆಸರಿನಿಂದಲೂ, ಬೆಂಬಲಿಗರಿಂದ 'ಸುಶಾಸನ ಬಾಬು' (ಉತ್ತಮ ಆಡಳಿತಗಾರ) ಎಂಬ ಪ್ರಶಂಸೆಗೂ ಪಾತ್ರರಾಗಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ (71) ಅವರು, 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿ ದಾಖಲೆ ಬರೆದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನಿತೀಶ್ ಕುಮಾರ್ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಿತೀಶ್ ಸಂಪುಟದ 26 ಸದಸ್ಯರಿಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ನೆರೆದಿದ್ದ ಸಭಿಕರ ಎದುರು ಗಮ್ಚಾ ( ತೆಳುವಾದ ಟವಲ್) ಬೀಸಿ, ಬಿಹಾರದ ಜನರಿಗೆ ಧನ್ಯವಾದ ಸಲ್ಲಿಸಿದರು.
ವಿಧಾನ ಪರಿಷತ್ತಿನ ಸದಸ್ಯರಾಗಿರುವ ನಿತೀಶ್ ಕುಮಾರ್, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ, ಮತ್ತೆ ಮುಖ್ಯಮಂತ್ರಿಯಾಗುವ ಮೂಲಕ ಅವರು ದಾಖಲೆ ಬರೆದಿದ್ದಾರೆ. ದೇಶದಲ್ಲಿ ಸುದೀರ್ಘ ಅವಧಿ ಅಧಿಕಾರದಲ್ಲಿದ್ದ 10 ಮುಖ್ಯಮಂತ್ರಿಗಳ ಪಟ್ಟಿಗೆ ಅವರ ಹೆಸರೂ ಸೇರ್ಪಡೆಗೊಂಡಿದೆ. ಇಂದಿರಾ ಗಾಂಧಿ ಹತ್ಯೆ ನಂತರ 1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ನಿತೀಶ್ ಕುಮಾರ್ ಮೊದಲ ಬಾರಿಗೆ ಬಿಹಾರ ವಿಧಾನಸಭೆ ಪ್ರವೇಶಿಸಿದ್ದರು. ಕಳೆದ 19 ವರ್ಷಗಳಿಂದ ಅವರು ಮುಖ್ಯಮಂತ್ರಿ ಗದ್ದುಗೆ ಉಳಿಸಿಕೊಂಡಿದ್ದಾರೆ.
ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಹಾರ ವಿಧಾನಸಭಾ ಚುನಾವಣೆಯ ಉಸ್ತುವಾರಿಯಾಗಿದ್ದ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖರು:
ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಸಾಮ್ರಾಟ್ ಚೌಧರಿ ಹಾಗೂ ಉಪ ನಾಯಕ ವಿಜಯ್ ಸಿನ್ಹಾ ಕೂಡ ನಿತೀಶ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ಈ ಇಬ್ಬರೂ ನಾಯಕರು ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಉಪ ಮುಖ್ಯ ಮಂತ್ರಿಗಳಾಗಿದ್ದರು. ಜೆಡಿ(ಯು) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶೋಕ್ ಚೌಧರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಜೈಸ್ವಾಲ್, ಎಚ್‌ಎಎಂನ ಸಂತೋಷ್ ಕುಮಾರ್ ಸುಮನ್ ಕೂಡ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಸ್ಥಾನಗಳಲ್ಲಿ, 202 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಅಧಿಕಾರಕ್ಕೆ ಮರಳಿತ್ತು. ಬಿಜೆಪಿ 89, ಜೆಡಿ(ಯು) 85, ಎಲ್‌ಜೆಪಿ (ಆರ್‌ವಿ) 19, ಎಚ್‌ಎಎಂ 5 ಮತ್ತು ಆರ್‌ಎಲ್‌ಎಂ 4 ಸ್ಥಾನಗಳಲ್ಲಿ ಗೆಲುವು ಗಳಿಸಿವೆ.
ನಿತೀಶ್ ಸಂಪುಟದ ಸಚಿವರು
ಬಿಜೆಪಿ 14
ಜೆಡಿಯು 8
ಎಲ್‌ಜೆಪಿ (ಆರ್‌ವಿ) 2
ಎಚ್‌ಎಎಂ 1
ಆರ್‌ಎಲ್‌ಎಂ 1 ( ಹಿಂದಿನ ಅವಧಿಯ ನಿತೀಶ್ ಸಚಿವ ಸಂಪುಟದಲ್ಲಿ ಬಿಜೆಪಿಯ 15, ಜೆಡಿ(ಯು)ನ 12, ಒಬ್ಬ ಸ್ವತಂತ್ರ ಅಭ್ಯರ್ಥಿ ಹಾಗೂ ಎಚ್‌ಎಎಂನ ಒಬ್ಬರು ಸಚಿವರಿದ್ದರು.)
- ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸೇವೆಗೆ ಮುಡಿಪಾಗಿರುವ ಅತ್ಯುತ್ಕೃಷ್ಟ ನಾಯಕರನ್ನು ಹೊಂದಿರುವ ನಿತೀಶ್ ನೇತೃತ್ವದ ತಂಡವು ಬಿಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಅಮಿತ್ ಶಾ, ಕೇಂದ್ರ ಗೃಹ ಸಚಿವ ಬಿಹಾರದ ಡಬಲ್ ಎಂಜಿನ್ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ಇನ್ನೂ ಹೆಚ್ಚಿನ ಶಕ್ತಿಯಿಂದ ಕಾರ್ಯನಿರ್ವಹಿಸಲಿದೆ - ಚಿರಾಗ್ ಪಾಸ್ವಾನ್ , ಕೇಂದ್ರ ಸಚಿವ ಎಲ್‌ಜೆಪಿ (ಆರ್‌ವಿ) ಅಧ್ಯಕ್ಷ ನಿತೀಶ್ ಸಂಪುಟದಲ್ಲಿ ಎಲ್‌ಜೆಪಿ (ಆರ್‌ವಿ)ಯ ಇಬ್ಬರು ಶಾಸಕರು ಸೇರ್ಪಡೆಯಾಗುವ ಮೂಲಕ ತಂದೆ ದಿ. ರಾಮ್‌ವಿಲಾಸ್ ಪಾಸ್ವಾನ್ ಅವರ ಕನಸು ನನಸಾಗಿದೆ. 'ಬಿಹಾರವೇ ಮೊದಲು ಬಿಹಾರಿಗಳೇ ಮೊದಲು' ಎನ್ನುವುದು ನಮ್ಮ ಮಂತ್ರ 2018ರ ಕಾಮನ್‌ವೆಲ್ತ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಕ್ರೀಡಾ ಪ್ರತಿಭೆ ಜಮುಯಿ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿಯ ಶ್ರೇಯಸಿ ಸಿಂಗ್ ಕೂಡ ನಿತೀಶ್ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ದಿವಂಗತ ದಿಗ್ವಿಜಯ ಸಿಂಗ್ ಅವರ ಪುತ್ರಿ. ಮೊದಲ ಗೆಲುವಿನಲ್ಲೇ ಶ್ರೇಯಸಿಗೆ ಸಚಿವರಾಗುವ ಭಾಗ್ಯವೂ ಒಲಿದಿದೆ. ಮುಜಾಫರ್‌ಪುರದ ಮಾಜಿ ಸಂಸದ ಅಜಯ್ ನಿಶಾದ್ ಅವರ ಪತ್ನಿ ಔರಾಯಿ ಕ್ಷೇತ್ರದ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ರಮಾ ನಿಶಾದ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೆಡಿ(ಯು)ನ ಬಿಜೇಂದ್ರ ಪ್ರಸಾದ್ ಯಾದವ್ 9ನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ನಿತೀಶ್ ಸಂಪುಟಕ್ಕೆ ಮರಳಿದ್ದಾರೆ.ಕ್ರೀಡಾ ಪ್ರತಿಭೆ ಶ್ರೇಯಸಿ ಸಿಂಗ್
ಎಂಎಲ್‌ಎ ಎಂಎಲ್‌ಸಿ ಅಲ್ಲದ ಪ್ರಕಾಶ್ ಸಂಪುಟಕ್ಕೆ
ಶಾಸಕ ಅಥವಾ ವಿಧಾನ ಪರಿಷತ್‌ನ ಸದಸ್ಯರೂ ಅಲ್ಲದ ದೀಪಕ್ ಪ್ರಕಾಶ್ ಅವರು ನಿತೀಶ್ ಸಂಪುಟದಲ್ಲಿ ಸ್ಥಾನ ಪಡೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ದೀಪಕ್ ರಾಷ್ಟ್ರೀಯ ಲೋಕ ಮೋರ್ಚಾದ (ಆರ್‌ಎಲ್‌ಎಂ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರ ಪುತ್ರ.
ರಾಜ್ಯ ರಾಜಕಾರಣದಲ್ಲಿ ಅಪರಿಚಿತರಾಗಿದ್ದ ದೀಪಕ್ ಹೆಸರು ಇದೇ ಮೊದಲ ಬಾರಿಗೆ ಮುನ್ನೆಲೆಗೆ ಬಂದಿದೆ. ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದ ಅವರು ಇತ್ತೀಚೆಗೆ ಭಾರತಕ್ಕೆ ಮರಳಿದ್ದಾರೆ. ಸಂಪುಟಕ್ಕೆ ಸೇರ್ಪಡೆಯಾದ 6 ತಿಂಗಳ ಒಳಗಾಗಿ ಅವರು ರಾಜ್ಯ ವಿಧಾನಮಂಡಲದ ಎರಡೂ ಸದನಗಳ ಪೈಕಿ ಒಂದರ ಸದಸ್ಯರಾಗಬೇಕಾಗುತ್ತದೆ.
ಸಸಾರಾಂ ಕ್ಷೇತ್ರದಿಂದ ಗೆದ್ದಿರುವ ಆರ್‌ಎಲ್‌ಎಂ ಪಕ್ಷದ ಸ್ನೇಹಲತಾ ಕುಶ್ವಾಹ ಅವರಿಗೂ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.




