HEALTH TIPS

'ಮತ ಕಳ್ಳತನ' ವಿರುದ್ಧ ಡಿ.14ರಂದು ರಾಮಲೀಲಾ ಮೈದಾನದಲ್ಲಿ ರ್‍ಯಾಲಿ: ಕಾಂಗ್ರೆಸ್‌

ನವದೆಹಲಿ: 'ಮತ ಕಳ್ಳತನ'ವಿರುದ್ಧ ಡಿಸೆಂಬರ್ 14ರಂದು ಇಲ್ಲಿನ ರಾಮಲೀಲಾ ಮೈದಾನದಲ್ಲಿ ಮಹಾರ್‍ಯಾಲಿ ನಡೆಸುವುದಾಗಿ ಕಾಂಗ್ರೆಸ್ ಶುಕ್ರವಾರ ಘೋಷಿಸಿದೆ.

ಭಾರತೀಯ ಚುನಾವಣಾ ಆಯೋಗ(ಇಸಿಐ) ಪಕ್ಷಪಾತಿಯಾಗಿದ್ದು, ಚುನಾವಣೆಗಳ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಸಮಾನ ಹೋರಾಟದ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ನಾಶಪಡಿಸುತ್ತಿದೆ ಎಂದು ಅದು ಆರೋಪಿಸಿದೆ.

ಮತ ಕಳ್ಳತನದ ಭೂತವು ಇಂದು ನಮ್ಮ ಪ್ರಜಾಪ್ರಭುತ್ವದ ಮೇಲೆ ಎರಗಿರುವ ದೊಡ್ಡ ಅಪಾಯವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

'ನಮ್ಮ ಸಂವಿಧಾನವನ್ನು ನಾಶಮಾಡುವ ಈ ಪ್ರಯತ್ನಗಳ ವಿರುದ್ಧ ದೇಶದಾದ್ಯಂತ ಸಂದೇಶವನ್ನು ಕಳುಹಿಸಲು ಕಾಂಗ್ರೆಸ್, ಡಿಸೆಂಬರ್ 14ರಂದು (ಮಧ್ಯಾಹ್ನ 1.30 ರಿಂದ) ನವದೆಹಲಿಯ ರಾಮಲೀಲಾ ಮೈದಾನದಲ್ಲಿ 'ವೋಟ್ ಚೋರ್ ಗಡ್ಡಿ ಛೋಡ್' ಮಹಾ ರ್‍ಯಾಲಿಯನ್ನು ನಡೆಸಲಿದೆ'ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

'ನಕಲಿ ಮತದಾರರನ್ನು ಸೇರಿಸುವುದು, ವಿರೋಧ ಪಕ್ಷಗಳ ಬಗ್ಗೆ ಒಲವು ಹೊಂದಿರುವ ಮತದಾರರ ಹೆಸರನ್ನು ಅಳಿಸುವುದು ಮತ್ತು ಸಾಮೂಹಿಕವಾಗಿ ಮತದಾರರ ಪಟ್ಟಿಯನ್ನು ತಿರುಚುವಿಕೆಯಂತಹ ಬಿಜೆಪಿ-ಇಸಿಐನ ದುಷ್ಟ ತಂತ್ರಗಳನ್ನು ತಿರಸ್ಕರಿಸಿ, ಭಾರತದ ಮೂಲೆ ಮೂಲೆಗಳಿಂದ ನಮಗೆ ಕೋಟ್ಯಂತರ ಸಹಿಗಳು ಬಂದಿವೆ'ಎಂದು ವೇಣುಗೋಪಾಲ್ ಹೇಳಿದರು.

ಚುನಾವಣಾ ಆಯೋಗವು ನಿಯಮಗಳನ್ನು ಹೇಗೆ ಬದಿಗೊತ್ತುತ್ತದೆ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ಹೇಗೆ ನಿರ್ಲಕ್ಷಿಸುತ್ತದೆ ಮತ್ತು ಬಿಜೆಪಿಯನ್ನು ಚುನಾವಣೆಗಳಲ್ಲಿ ಗೆಲ್ಲಿಸಲು ಹೇಗೆ ಭ್ರಷ್ಟ ಹಾದಿಯನ್ನು ಹಿಡಿಯುತ್ತದೆ ಎಂಬುದನ್ನು ಪ್ರತಿಯೊಬ್ಬ ಭಾರತೀಯನೂ ನೋಡಿದ್ದಾನೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.

'ಒಂದು ಕಾಲದಲ್ಲಿ ತಟಸ್ಥವಾಗಿದ್ದ ಚುನಾವಣಾ ಆಯೋಗವು ಈಗ ಸ್ಪಷ್ಟವಾಗಿ ಪಕ್ಷಪಾತಿಯಾಗಿದೆ. ಚುನಾವಣೆಗಳಲ್ಲಿ ಸಮಾನ ಹೋರಾಟದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ'ಎಂದು ಅವರು ದೂರಿದ್ದಾರೆ.

'ಚುನಾವಣಾ ವ್ಯವಸ್ಥೆ ಮೇಲಿನ ಈ ದಾಳಿ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ನಾವು ಮೌನವಾಗಿರಲು ಸಾಧ್ಯವಿಲ್ಲ. ಈ ಮಹಾ ರ್‍ಯಾಲಿಯು ಭಾರತೀಯ ಪ್ರಜಾಪ್ರಭುತ್ವವನ್ನು ಮತಗಳ್ಳರ ಹಿಡಿತದಿಂದ ಹೊರತರುವ ನಮ್ಮ ಹೋರಾಟದ ಆರಂಭ ಮಾತ್ರ!'ಎಂದು ವೇಣುಗೋಪಾಲ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries