HEALTH TIPS

ಬಾಂಗ್ಲಾ: ಪದಚ್ಯುತ ಪ್ರಧಾನಿ ಹಸೀನಾ ವಿರುದ್ಧದ ಪ್ರಕರಣ; ನ.17ಕ್ಕೆ ತೀರ್ಪು ಪ್ರಕಟ

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ವಿರುದ್ಧದ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ನವೆಂಬರ್‌ 17 ರಂದು ತೀರ್ಪು ಪ್ರಕಟಗೊಳಿಸುವುದಾಗಿ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ಗುರುವಾರ ತಿಳಿಸಿದೆ.

ಹಸೀನಾ ವಿರುದ್ಧದ ‍ಪ್ರಕರಣಗಳನ್ನು ಪಿತೂರಿ ಎಂದು ಕರೆದಿರುವ ಅವಾಮಿ ಲೀಗ್‌ ಪಕ್ಷವು ಗುರುವಾರ ಢಾಕಾ ಲಾಕ್‌ಡೌನ್‌ಗೆ ಕರೆ ನೀಡಿತ್ತು.

ಲಾಕ್‌ಡೌನ್‌ ನಡುವೆಯೇ ಬಿಗಿ ಭದ್ರತೆಯಲ್ಲಿ ನ್ಯಾಯಮಂಡಳಿಯಲ್ಲಿ ಕಲಾಪ ನಡೆಯಿತು.

ತ್ರಿಸದಸ್ಯ ನ್ಯಾಯಪೀಠವು ನವೆಂಬರ್‌ 17ಕ್ಕೆ ತೀರ್ಪು ‍ಪ್ರಕಟಿಸುವುದಾಗಿ ಹೇಳಿದೆ.

ಮಾಜಿ ಪ್ರಧಾನಿ ಶೇಖ್‌ ಹಸೀನಾ, ಮಾಜಿ ಗೃಹ ಸಚಿವ ಅಸಾದುಜ್ಜಾಮಾನ್‌ ಖಾನ್‌ ಕಮಲ್‌ ಹಾಗೂ ಮಾಜಿ ಐಜಿ‍‍‍‍ಪಿ ಚೌಧರಿ ಅಬ್ದುಲ್ಲಾ ಅಲ್‌-ಮುಮುನ್‌ ಅವರ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಐಟಿಸಿ-ಬಿಡಿ ಕೈಗೆತ್ತಿಕೊಂಡಿತ್ತು. ಚೌಧರಿ ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಿ ಮಾಫಿ ಸಾಕ್ಷಿಯಾಗಿದ್ದಾರೆ.

ಹಸೀನಾ ಮತ್ತು ಖಾನ್‌ ವಿಚಾರಣೆಗೆ ಹಾಜರಾಗದ ಕಾರಣ 54 ಸಾಕ್ಷ್ಯಗಳನ್ನು ಪರಿಶೀಲಿಸಿ, ಆರೋಪಿಗಳ ಅನುಪಸ್ಥಿತಿಯಲ್ಲೇ ಅಕ್ಟೋಬರ್‌ 23ರಂದು ವಿಚಾರಣೆ ಪೂರ್ಣಗೊಳಿಸಲಾಗಿದೆ. ಆರೋಪಿಗಳಿಗೆ ಮರಣ ದಂಡನೆಯನ್ನೇ ವಿಧಿಸಬೇಕು ಎಂದು ನ್ಯಾಯ ಮಂಡಳಿಯ ವಕೀಲರು ವಾದ ಮಂಡಿಸಿದ್ದಾರೆ.

ತಮ್ಮ ಸರ್ಕಾರದ ಪತನಕ್ಕೆ ಕಾರಣವಾದ ವಿದ್ಯಾರ್ಥಿಗಳ ವಿರುದ್ಧ ದಂಗೆಯನ್ನು ಹತ್ತಿಕ್ಕಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಹಸೀನಾ ಗುರಿಯಾಗಿದ್ದಾರೆ.

ಬಿಗಿ ಬಂದೋಬಸ್ತ್‌: ತೀರ್ಪು ಪ್ರಕಟಣೆಯ ದಿನಾಂಕ ಘೋಷಣೆ ಹಾಗೂ ಢಾಕಾ ಲಾಕ್‌ಡೌನ್‌ ಕಾರಣಕ್ಕೆ ಢಾಕಾದಲ್ಲಿ ಗುರುವಾರ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ, ಸಂಘರ್ಷಗಳು ನಡೆಯದಂತೆ ಎಚ್ಚರ ವಹಿಸಲು ಸೇನಾ ಪಡೆಗಳು, ಬಾಂಗ್ಲಾದೇಶ ಗಡಿ ಭದ್ರತಾ ಪಡೆ ಹಾಗೂ ಅರೆ ಸೇನಾ ಪಡೆಯ ತುಕಡಿಗಳನ್ನು ರಾಜಧಾನಿ ಢಾಕಾದಲ್ಲಿ ನಿಯೋಜಿಸಲಾಗಿತ್ತು.

ನ್ಯಾಯಮಂಡಳಿಯ ಸುತ್ತಲೂ ಭಾರಿ ಭದ್ರತೆ ನಿಯೋಜಿಸಲಾಗಿತ್ತು. ಲಾಕ್‌ಡೌನ್‌ನಿಂದಾಗಿ ಜನಸಂಚಾರವಿಲ್ಲದೇ ರಸ್ತೆಗಳು, ಬಸ್‌ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

ಪಕ್ಷಪಾತಿ ನ್ಯಾಯಮಂಡಳಿ: ಹಸೀನಾ

ಐಸಿಟಿ-ಬಿಡಿ ತಮ್ಮ ರಾಜಕೀಯ ವಿರೋಧಿಗಳ ತಾಳಕ್ಕೆ ತಕ್ಕಂತೆ ನಡೆಯುತ್ತಿರುವ ನ್ಯಾಯ ಮಂಡಳಿ ಎಂದು ಇತ್ತೀಚೆಗೆ ತಾವು ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹಸೀನಾ ದೂರಿದ್ದರು.

'ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ಎದುರಿಗೆ ಅಗತ್ಯವಿದ್ದರೆ ನಾನು ವಿಚಾರಣೆಗೆ ಹಾಜರಾಗಲು ಸಿದ್ಧ' ಎಂದು ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries