HEALTH TIPS

ನ.19 ಅಥವಾ 20ರಂದು ನಿತೀಶ್‌ ಪ್ರಮಾಣ: ಸಮಾರಂಭದಲ್ಲಿ ಮೋದಿ, ಶಾ ಭಾಗಿ ಸಾಧ್ಯತೆ

ಪಾಟ್ನಾ: ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಪಾಳಯದ ಅಭೂತಪೂರ್ವ ಜಯದಿಂದ ಬೀಗುತ್ತಿರುವ ನಿತೀಶ್‌ ಕುಮಾರ್‌ ಕೆಲವೇ ದಿನಗಳಲ್ಲಿ ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಹೀಗಾಗಿ ಅವರ ಲಭ್ಯತೆಗೆ ಅನುಗುಣವಾಗಿ ನವೆಂಬರ್ 19 ಅಥವಾ 20ರಂದು ನಿತೀಶ್‌ ಕುಮಾರ್‌ ಪ್ರಮಾಣ ಸ್ವೀಕರಿಸುವರು ಎಂದು ಎನ್‌ಡಿಎದ ಉನ್ನತ ಮೂಲಗಳು ಹೇಳಿವೆ.

ಮೋದಿ ಅವರಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ.

'ರಾಜಭವನದ ಬದಲಾಗಿ, ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆಯೋಜಿಸುವ ಸಾಧ್ಯತೆ ಇದೆ' ಎಂದೂ ತಿಳಿಸಿವೆ.

ಸಂಪುಟ ಸಭೆ:

ನಿತೀಶ್‌ ಕುಮಾರ್‌ ಅವರು ಸೋಮವಾರ ಸಚಿವ ಸಂಪುಟ ಸಭೆ ಕರೆದಿದ್ದು, 17ನೇ ವಿಧಾನಸಭೆಯನ್ನು ವಿಸರ್ಜಿಸುವ ಕುರಿತು ಅವರು ಶಿಫಾರಸು ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಮೂಲಗಳು ಹೇಳಿವೆ.

ಸಭೆ ಬಳಿಕ ಅವರು, ರಾಜಭವನಕ್ಕೆ ತೆರಳಿ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವರು ಎಂದೂ ತಿಳಿಸಿವೆ.

ಬಿಹಾರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಚುನಾವಣಾ ಆಯೋಗವು ರಾಜ್ಯಪಾಲರಿಗೆ ಸಲ್ಲಿಸಿದೆ. ಇದರೊಂದಿಗೆ ಮಾದರಿ ನೀತಿ ಸಂಹಿತೆಯು ಭಾನುವಾರ ಕೊನೆಗೊಂಡಿತುನೀತಿ ಸಂಹಿತೆ ಅಂತ್ಯ:

ಪ್ರಸಕ್ತ ವಿಧಾನಸಭೆ ಅವಧಿಯು ನವೆಂಬರ್ 22ಕ್ಕೆ ಕೊನೆಗೊಳ್ಳಲಿದೆ.

ಅಧಿಕಾರ ಹಂಚಿಕೆ: ಸೂತ್ರವೂ ಸಿದ್ಧ

ಅಧಿಕಾರ ಹಂಚಿಕೆ ಕುರಿತಂತೆ ದೆಹಲಿ ಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಯು ನಡುವೆ ಗೊಂದಲ ಮನೆ ಮಾಡಿದ್ದು ಮಾತುಕತೆಗಳು ನಡೆದಿವೆ ಎಂದು ಮೂಲಗಳು ಹೇಳಿವೆ. ಮತ್ತೊಂದೆಡೆ ಅಧಿಕಾರ ಹಂಚಿಕೆಗೆ ಸಂಬಂಧಿಸಿ ಸೂತ್ರವೊಂದು ಕೂಡ ಸಿದ್ಧವಾಗಿದೆ.ಪ್ರತಿ ಆರು ಜನ ಶಾಸಕರಿಗೆ ಒಬ್ಬರು ಮಂತ್ರಿಯಂತೆ ಸಂಪುಟ ರಚಿಸಲು ನಿರ್ಧರಿಸಲಾಗಿದೆ' ಎಂದು ಇವೇ ಮೂಲಗಳು ಹೇಳಿವೆ.

ಈ ಸೂತ್ರದ ಪ್ರಕಾರ ಬಿಜೆಪಿಯಿಂದ 15 ಸಚಿವರು ಇರಲಿದ್ದರೆ ಜೆಡಿಯು-14 ಎಲ್‌ಜೆಪಿ-3 ಹಾಗೂ ಎಚ್‌ಎಎಂ ಹಾಗೂ ಆರ್‌ಎಲ್‌ಎಂ ಪಕ್ಷಗಳು ತಲಾ ಒಬ್ಬರು ಸಚಿವರನ್ನು ಹೊಂದಲಿವೆ' ಎಂದು ಎನ್‌ಡಿಎದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಬಿಜೆಪಿ ಹಾಗೂ ಜೆಡಿಯು ಕ್ರಮವಾಗಿ 89 ಹಾಗೂ 85 ಶಾಸಕರನ್ನು ಹೊಂದಿವೆ. ಎಲ್‌ಜೆಪಿ(ಆರ್‌)-19 ಎಚ್‌ಎಎಂ-5 ಹಾಗೂ ಆರ್‌ಎಲ್‌ಎಂ ಪಕ್ಷ 4 ಸ್ಥಾನಗಳಲ್ಲಿ ಗೆದ್ದಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ 202 ಶಾಸಕರನ್ನು ಹೊಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries