HEALTH TIPS

ಆತ್ಮಾಹುತಿ ಬಾಂಬರ್‌ಗಾಗಿ 1 ವರ್ಷ ಹುಡುಕಾಟ ನಡೆಸಿದ್ದ 'ವೈಟ್‌ ಕಾಲರ್' ಉಗ್ರ ಜಾಲ

ನವದೆಹಲಿ: ವೈದ್ಯರ ಗುಂಪೊಂದು ಭಾಗವಾಗಿರುವ 'ವೈಟ್‌ ಕಾಲರ್ ಉಗ್ರ ಜಾಲ'ವು ಕಳೆದ ಒಂದು ವರ್ಷದಿಂದ ಆತ್ಮಾಹುತಿ ಬಾಂಬರ್‌ಗಾಗಿ ಹುಡುಕಾಟ ನಡೆಸಿತ್ತು. ಉಗ್ರ ಜಾಲದ ಈ ಕಾರ್ಯಸೂಚಿಯನ್ನು ಡಾ.ಉಮರ್‌ ನಬಿ ಕಾರ್ಯಗತಗೊಳಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

'ಕೆಂಪು ಕೋಟೆ ಬಳಿ ಸ್ಫೋಟಗೊಂಡ ಕಾರನ್ನು ಚಾಲನೆ ಮಾಡುತ್ತಿದ್ದ ಹಾಗೂ ಈ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ ಎನ್ನಲಾದ ಡಾ.ಉಮರ್ ಒಬ್ಬ ಕಟ್ಟಾ ಮೂಲಭೂತವಾದಿಯಾಗಿದ್ದ. ಸಂಘಟನೆಯ ಕಾರ್ಯಾಚರಣೆಗಳನ್ನು ನಡೆಸುವುದಕ್ಕೆ ಆತ್ಮಾಹುತಿ ಬಾಂಬರ್‌ನ ಅಗತ್ಯವಿದೆ ಎಂಬುದಾಗಿ ಆತ ಹೇಳುತ್ತಿದ್ದ ಎಂಬುದಾಗಿ ಬಂಧಿತ ಸಹ ಆರೋಪಿ ಯೊಬ್ಬ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ' ಎಂದೂ ಅಧಿಕಾರಿಗಳು ಹೇಳಿದ್ದಾರೆ.

'ವೈದ್ಯರನ್ನು ಒಳಗೊಂಡ ಉಗ್ರರ ಜಾಲವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕುಲ್ಗಾಮ್‌ನ ಮಸೀದಿ ಯೊಂದರಲ್ಲಿ ಭೇಟಿ ಮಾಡಿದ್ದೆ. ನಂತರ ಆ ಗುಂಪು ನನ್ನನ್ನು ಹರಿಯಾಣದ ಫರೀದಾಬಾದ್‌ನಲ್ಲಿರುವ ಅಲ್‌ ಫಲಾಹ್‌ ವಿಶ್ವವಿದ್ಯಾಲಯದ ಬಾಡಿಗೆ ಕೋಣೆ ಯೊಂದಕ್ಕೆ ಕರೆದುಕೊಂಡು ಹೋಯಿತು ಎಂದು ಆತ ತಿಳಿಸಿದ್ದಾನೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

'ನಿಷೇಧಿತ ಜೈಷ್‌-ಎ-ಮೊಹಮ್ಮದ್‌ ಸಂಘಟನೆ ಪರವಾಗಿ ನಾನು ಸ್ಥಳೀಯ ವಾಗಿ ಕೆಲಸ ಮಾಡಬೇಕು ಎಂಬುದಾಗಿ ಬಂಧಿತ ವೈದ್ಯರ ಗುಂಪು ಬಯಸಿತ್ತು. ಆತ್ಮಾಹುತಿ ಬಾಂಬರ್ ಆಗುವಂತೆ ನನ್ನ ಮನವೊಲಿಸಲು ಉಮರ್‌ ಹಲವು ತಿಂಗಳು ಪ್ರಯತ್ನಿಸಿದ್ದ ಎಂಬುದಾಗಿ ಬಂಧಿತ ಮಾಹಿತಿ ನೀಡಿದ್ದಾನೆ' ಎಂದಿದ್ದಾರೆ.

'ತನ್ನ ಆರ್ಥಿಕ ಸ್ಥಿತಿ ಸರಿ ಇಲ್ಲ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಇಸ್ಲಾಂ ನಿಷೇಧಿಸುತ್ತದೆ ಎಂಬ ಕಾರಣ ನೀಡಿ ಆ ವ್ಯಕ್ತಿ ಆತ್ಮಾಹುತಿ ಬಾಂಬರ್ ಆಗುವುದಕ್ಕೆ ಒಪ್ಪಲಿಲ್ಲ. ಹೀಗಾಗಿ, 'ಉಗ್ರ ಜಾಲ'ದ ಯೋಜನೆ ಕಳೆದ ಏಪ್ರಿಲ್‌ನಲ್ಲಿ ವಿಫಲಗೊಂಡಿತು' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪರಾಧ ಹಿನ್ನೆಲೆ ಇಲ್ಲದವರಿಗೆ ಆದ್ಯತೆ

ಶ್ರೀನಗರ (ಪಿಟಿಐ): ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳು ತಮ್ಮ ಕಾರ್ಯಾಚರಣೆ ವಿಧಾನಗಳನ್ನು ಇತ್ತೀಚಿನ ದಿನಗಳಲ್ಲಿ ಬದಲಾಯಿಸಿವೆ. ಅದೇ ರೀತಿ, ಇಂತಹ ಸಂಘಟನೆಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳುವ ವಿಧಾನವೂ ಬದಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿರದ, ಪ್ರತ್ಯೇಕತಾ ಗುಂಪುಗಳೊಂದಿಗೆ ನಂಟು ಹೊಂದಿರದ ಯುವಜನರನ್ನು ಭಯೋತ್ಪಾದಕ ಸಂಘಟನೆಗಳಿಗೆ ನೇಮಿಸಿಕೊಳ್ಳ ಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

'ಭಯೋತ್ಪಾದಕ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವಾಗ ಕಳೆದ ಎರಡು ದಶಕಗಳ ಹಿಂದೆ ಅನುಸರಿಸುತ್ತಿದ್ದ ವಿಧಾನಕ್ಕಿಂತ ಈಗಿನ ವಿಧಾನವೂ ಸಂಪೂರ್ಣ ಭಿನ್ನವಾಗಿದೆ' ಎಂದೂ ಹೇಳಿದ್ದಾರೆ.

'ವೈಟ್‌ ಕಾಲರ್ ಉಗ್ರ ಜಾಲ' ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಕೂಡ, ಉಗ್ರ ಸಂಘಟನೆಗಳಿಗೆ ನೇಮಕಾತಿ ಮಾಡುವಲ್ಲಿ ಆಗಿರುವ ಬದಲಾವಣೆಯನ್ನು ಗುರುತಿಸಿದ್ದಾರೆ. ಅದರಲ್ಲೂ, ದೆಹಲಿ ಸ್ಫೋಟಕ್ಕೆ ಸಂಬಂಧಿಸಿ ಬಂಧಿಸಿರುವವರನ್ನು ವಿಚಾರಣೆಗೆ ಒಳಪಡಿಸಿದಾಗ, ಅವರ ಹಿನ್ನೆಲೆಯಲ್ಲಿ ಸಾಮ್ಯತೆ ಇರುವುದು ಕಂಡುಬಂದಿದೆ.

'ಬಂಧಿತ ಆರೋಪಿಗಳಾದ ಡಾ.ಆದಿಲ್ ರಾಠರ್, ಆತನ ಸಹೋದರ ಡಾ.ಮುಜಾಫರ್ ರಾಠರ್ ಹಾಗೂ ಡಾ.ಮುಜಮ್ಮಿಲ್‌ ಗನಿ ಅವರು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಅಥವಾ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಬಂಧಿತರ ಕುಟುಂಬದ ಸದಸ್ಯರು ಸಹ ಯಾವುದೇ ಪ್ರತ್ಯೇಕತಾವಾದಿ ಗುಂಪು ಅಥವಾ ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿಲ್ಲ' ಎಂದು ಇದೇ ಅಧಿಕಾರಿ ಹೇಳಿದ್ದಾರೆ.

'ಕೆಂಪು ಕೋಟೆ ಬಳಿ ನವೆಂಬರ್ 10ರಂದು ಸ್ಫೋಟಗೊಂಡ ಕಾರನ್ನು ಚಲಾಯಿಸುತ್ತಿದ್ದ ಡಾ.ಉಮರ್‌ ನಬಿಗೂ ಇದೇ ಮಾತು ಅನ್ವಯಿ ಸುತ್ತದೆ. ಆತನ ಕುಟುಂಬಸ್ಥರು ಕೂಡ ಇಂತಹ ಯಾವುದೇ ನಂಟು ಹೊಂದಿಲ್ಲ' ಎಂದಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಅಥವಾ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿ ಉದ್ದಕ್ಕೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ನಿರತರಾಗಿರುವವರು ಉನ್ನತ ವ್ಯಾಸಂಗ ಮಾಡಿರುವ ಆದರೆ ಅಪರಾಧ ಹಿನ್ನೆಲೆ ಹೊಂದಿರದ ಯುವಜನತೆಯನ್ನು ಉದ್ದೇಶಪೂರ್ವಕವಾಗಿಯೇ ನೇಮಕ ಮಾಡಿಕೊಳ್ಳುತ್ತಿರಬಹುದು. ವೈದ್ಯರ ಗುಂಪೊಂದು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯ ಇಲ್ಲ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

9 ಎಂಎಂ ಗುಂಡುಗಳು ಪತ್ತೆ

ನವದೆಹಲಿ (ಪಿಟಿಐ): ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡ ಸ್ಥಳದಿಂದ ವಶಪಡಿಸಿಕೊಂಡ ಮೂರು ಕಾರ್ಟ್ರಿಡ್ಜ್‌ಗಳನ್ನು ಭದ್ರತಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಮೂರು ಕಾರ್ಟ್ರಿಡ್ಜ್‌ಗಳ ಪೈಕಿ ಎರಡು ಸಜೀವ ಗುಂಡು ಗಳಾಗಿದ್ದು, ಒಂದು ಖಾಲಿ ಶೆಲ್‌ ಆಗಿದೆ.

ಮೂಲಗಳ ಪ್ರಕಾರ, 9 ಎಂಎಂ ಗುಂಡುಗಳನ್ನು ಸಾಮಾನ್ಯವಾಗಿ ಸಶಸ್ತ್ರ ಪಡೆಗಳು ಅಥವಾ ವಿಶೇಷ ಅನುಮತಿ ಪಡೆದಿರುವ ವ್ಯಕ್ತಿಗಳಿಗೆ ನೀಡಲಾಗುತ್ತದೆ.

'ಈ ಕಾರ್ಟ್ರಿಡ್ಜ್‌ಗಳು ಘಟನಾ ಸ್ಥಳದಲ್ಲಿ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿಗೆ ಸೇರಿದವಲ್ಲ. ಅವರ ಬಳಿ ಇದ್ದ ಗುಂಡು ಕಾಣೆಯಾಗಿಲ್ಲ. ಹೀಗಾಗಿ, ಈ ಗುಂಡುಗಳು ಶಂಕಿತನ ಬಳಿ ಇದ್ದವೇ ಎಂಬ ಶಂಕೆ ವ್ಯಕ್ತವಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಆರೋಪಿ ಉಮರ್‌ ನಬಿ ಫರೀದಾಬಾದ್‌ನಿಂದ ಹೊರಟು ಹರಿಯಾಣದ ನೂಹ್‌ಗೆ ಭೇಟಿ ನೀಡಿ ದೆಹಲಿಯಲ್ಲಿ ಚಹಾ ಕುಡಿದ ಸಮಯದಿಂದ ಹಿಡಿದು ಸ್ಫೋಟಕ್ಕೆ ಕಾರಣವಾದ ಸಂಪೂರ್ಣ ಘಟನೆಯನ್ನು ಮರುಸೃಷ್ಟಿಸಲು ಭದ್ರತಾ ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ' ಎಂದು ಹೇಳಿದ್ದಾರೆ.

ನ.10ರಂದು ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿ 13 ಮಂದಿ ಮೃತಪಟ್ಟು, 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries