ಶ್ರೀನಗರ: ಜಮ್ಮುಕಾಶ್ಮೀರ ಪೊಲೀಸರು ಬುಧವಾರ ಕುಲಗಾಂವ್ನಲ್ಲಿ ನಿಷೇಧಿತ ಜೆಇಎಲ್ ಸಂಘಟನೆಯ ವಿರುದ್ಧ ಬೃಹತ್ ಕಾರ್ಯಾಚರಣೆಯನ್ನು ಆರಂಭಿಸಿದ್ದು 200ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಅಪಾಯಕಾರಿ ಸಾಮಾಗ್ರಿಗಳು ಹಾಗೂ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದಿಲ್ಲಿ ಕಾರ್ ಸ್ಫೋಟ ಹಾಗೂ ವೈದ್ಯರುಗಳು ಶಾಮೀಲಾಗಿದ್ದಾರೆನ್ನಲಾದ ಅಂತರ್ ರಾಜ್ಯ ಉಗ್ರಗಾಮಿ ಜಾಲವನ್ನು ಭೇದಿಸಿದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.
ಕುಲಗಾಂವ್ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 500ಕ್ಕೂ ಅಧಿಕ ಮಂದಿಯನ್ನು ಪ್ರಶ್ನಿಸಲಾಗಿದೆ ಹಾಗೂ ಹಲವರನ್ನು ಬಂಧಿಸಲಾಗಿದೆ ಮತ್ತು ಭದ್ರತಾ ಸಿಬ್ಬಂದಿಯು 400ಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.
ಉಗ್ರಗಾಮಿಗಳ ಜಾಲವನ್ನು ಹಾಗೂ ಅವುಗಳಿಗೆ ನೆರವು ನೀಡುವ ವ್ಯವಸ್ಥೆಯನ್ನು ತಳಮಟ್ಟದಿಂದ ಕಿತ್ತುಹಾಕುವ ಪ್ರಯತ್ನಗಳ ಭಾಗವಾಗಿ ಜೆಇಎಲ್ ಕಾರ್ಯಕರ್ತರು ಹಾಗೂ ಅವರ ಸಹಚರರ ಮನೆಗಳು ಮತ್ತು ಆವರಣಗಳ ಮೇಲೆ ದಾಳಿ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ನೆರೆಯ ಜಿಲ್ಲೆಯಾದ ಶೋಪಿಯಾನ್ನಲ್ಲಿಯೂ ಜೆಇಎಲ್ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಂಡು ಇದೇ ರೀತಿಯ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ದಿಲ್ಲಿ ಸ್ಫೋಟ ಕಾರು ಸ್ಫೋಟ ಪ್ರಕರಣದ ಬಳಿಕ ಜಮ್ಮುಕಾಶ್ಮೀರಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ ಹಠಾತ್ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.




