ಗ್ಲಾಸ್ಗೋ: 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥೇಯ ಹಕ್ಕನ್ನು ಅಹ್ಮದಾಬಾದ್ ಗೆ ನೀಡಲಾಗಿದೆ. ಸ್ಕಾಟ್ ಲ್ಯಾಂಡ್ ರಾಜಧಾನಿ ಗ್ಲಾಸ್ಗೊದಲ್ಲಿ ಬುಧವಾರ ನಡೆದ ಕಾಮನ್ ವೆಲ್ತ್ ಸ್ಪೋರ್ಟ್ಸ್‌ನ ಮಹಾಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಇದರೊಂದಿಗೆ, ಕಾಮನ್‌ವೆಲ್ತ್ ಕ್ರೀಡಾಕೂಟವು ಎರಡು ದಶಕಗಳ ಬಳಿಕ ಭಾರತಕ್ಕೆ ಮರಳುತ್ತಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟ ಮೌಲ್ಯಮಾಪನ ಸಮಿತಿಯ ಉಸ್ತುವಾರಿಯಲ್ಲಿ ನಡೆದ ಕ್ರೀಡಾಂಗಣ ಆಯ್ಕೆ ಪ್ರಕ್ರಿಯೆಯ ಕೊನೆಯಲ್ಲಿ ಈ ಶಿಫಾರಸು ಮಾಡಲಾಗಿದೆ.
''ಭಾರತವು ಈ ಕ್ರೀಡಾಕೂಟಕ್ಕೆ ಬೃಹತ್ ಆಯಾಮ, ಮಹತ್ವಾಕಾಂಕ್ಷೆ, ಶ್ರೀಮಂತ ಸಂಸ್ಕೃತಿ, ಅಗಾಧ ಕ್ರೀಡಾ ಗೀಳನ್ನು ತರುತ್ತದೆ. ಕಾಮನ್‌ವೆಲ್ತ್ ಗೇಮ್ಸ್‌ನ ಮುಂದಿನ ಶತಮಾನವನ್ನು ನಾವು ಉತ್ತಮ ಆರೋಗ್ಯದೊಂದಿಗೆ ಆರಂಭಿಸುತ್ತೇವೆ'' ಎಂದು ಕಾಮನ್‌ವೆಲ್ತ್ ಸ್ಪೋರ್ಟ್ ನ ಅಧ್ಯಕ್ಷ ಡಾ. ಡೊನಾಲ್ಡ್ ರುಕೇರ್ ಹೇಳಿದರು.
2036ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಮಹತ್ವಾಕಾಂಕ್ಷೆಗೆ ಈ ನಿರ್ಧಾರವು ಮತ್ತಷ್ಟು ಬಲ ನೀಡಿದೆ.
ಒಲಿಂಪಿಕ್ಸ್ ಆತಿಥೆಯ ಹಕ್ಕುಗಳನ್ನು ಪಡೆಯುವ ಸ್ಪರ್ಧೆಯಲ್ಲಿರುವ ಅಹ್ಮದಾಬಾದ್ ಕಳೆದ ದಶಕದಲ್ಲಿ ತನ್ನ ಕ್ರೀಡಾ ಮೂಲಸೌಕರ್ಯವನ್ನು ಯುದ್ಧೋಪಾದಿಯಲ್ಲಿ ಮೇಲ್ದರ್ಜೆಗೇರಿಸಿದೆ.
2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜನೆಗೆ ಅಹ್ಮದಾಬಾದ್ ಗೆ ಸ್ಪರ್ಧೆಯೊಡ್ಡಿದ್ದು ನೈಜೀರಿಯದ ಅಬುಜ ನಗರ. ಆದರೆ, 2034ರ ಕ್ರೀಡಾಕೂಟಕ್ಕೆ ಅಬುಜವನ್ನು ಪರಿಗಣಿಸಲು ಕಾಮನ್‌ವೆಲ್ತ್ ಸ್ಪೋರ್ಟ್ಸ್ ನಿರ್ಧರಿಸಿತು.




