ಜೊಹಾನ್ಸ್ ಬರ್ಗ್: ಜಿ20 ಗುಂಪಿನಿಂದ ದಕ್ಷಿಣ ಆಫ್ರಿಕಾವನ್ನು ತೆಗೆದು ಹಾಕಿ ಆ ಜಾಗದಲ್ಲಿ ಮಧ್ಯ ಯುರೋಪ್ ನ ದೇಶವನ್ನು ಸ್ಥಾಪಿಸಲು ಅಮೆರಿಕ ಒತ್ತಡ ಹೇರುತ್ತಿದೆ ಎಂದು ದಕ್ಷಿಣ ಆಫ್ರಿಕಾದ ಅಧಿಕಾರಿಗಳು ಹೇಳಿದ್ದಾರೆ.
2026ರ ಸಾಲಿನಲ್ಲಿ ಜಿ20 ಅಧ್ಯಕ್ಷತೆಯನ್ನು ಅಮೆರಿಕ ವಹಿಸಿದ ಬಳಿಕ ಜಿ20 ಸಭೆಗಳಿಂದ ದಕ್ಷಿಣ ಆಫ್ರಿಕಾವನ್ನು ಹೊರಗಿಟ್ಟಿರುವುದಾಗಿ ಅಮೆರಿಕ ಸೂಚಿಸುವ ನಿರೀಕ್ಷೆಯಿದೆ ಎಂದು ದಕ್ಷಿಣ ಆಫ್ರಿಕಾ ಸರಕಾರದ ಮೂಲಗಳು ಹೇಳಿವೆ.
ಒಂದು ವೇಳೆ ಈ ಬೆಳವಣಿಗೆ ನಡೆದರೆ ಎರಡೂ ದೇಶಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಆಳಗೊಳ್ಳಲಿದೆ ಎಂದು `ಬ್ಲೂಮ್‍ಬರ್ಗ್' ವರದಿ ಮಾಡಿದೆ.
ಜಿ20ರ ಗುಂಪಿನಿಂದ ದಕ್ಷಿಣ ಆಫ್ರಿಕಾವನ್ನು ತೆಗೆದು ಹಾಕಿ ಟ್ರಂಪ್ ಆಡಳಿತಕ್ಕೆ ನಿಕಟವಾಗಿರುವ ಮಧ್ಯ ಯುರೋಪ್ ನ ಹೊಸ ಸದಸ್ಯನನ್ನು ಆ ಸ್ಥಾನಕ್ಕೆ ನೇಮಿಸುವ ಉದ್ದೇಶವಿದೆ. ಮುಂದಿನ ವರ್ಷ ನಡೆಯಲಿರುವ ಜಿ20 ಗುಂಪಿನ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿರುವ ದಕ್ಷಿಣ ಆಫ್ರಿಕಾ ಅಧಿಕಾರಿಗಳಿಗೆ ವೀಸಾವನ್ನು ತಡೆಹಿಡಿಯುವುದು ಈ ನಿರ್ಧಾರದ ಮುಂದಿನ ಹಂತವಾಗಿರಬಹುದು ಎಂದು ವರದಿ ಹೇಳಿದೆ.
ದಕ್ಷಿಣ ಆಫ್ರಿಕಾದಲ್ಲಿ `ಬಿಳಿಯರ ನರಮೇಧ' ನಡೆಯುತ್ತಿದೆ. ದಕ್ಷಿಣ ಆಫ್ರಿಕಾದ ಕಪ್ಪುವರ್ಣೀಯ ಸಮುದಾಯ ಬಿಳಿಯರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಟ್ರಂಪ್, ದಕ್ಷಿಣ ಆಫ್ರಿಕಾದಲ್ಲಿ ಕಳೆದ ವಾರ ನಡೆದಿದ್ದ ಜಿ20 ಶೃಂಗಸಭೆಯನ್ನು ಬಹಿಷ್ಕರಿಸಿದ್ದರು ಮತ್ತು ತನ್ನ ಪ್ರತಿನಿಧಿಯಾಗಿ ದಕ್ಷಿಣ ಆಫ್ರಿಕಾದಲ್ಲಿನ ಅಮೆರಿಕ ರಾಯಭಾರಿ ಪಾಲ್ಗೊಳ್ಳುತ್ತಾರೆ ಎಂದಿದ್ದರು.
ಆದರೆ, ಜಿ20 ಗುಂಪಿನ ಮುಂದಿನ ಅಧ್ಯಕ್ಷತೆಯನ್ನು ಅಮೆರಿಕ ರಾಯಭಾರಿ ಕಚೇರಿಯ `ಕಿರಿಯ ಅಧಿಕಾರಿಗೆ' ಹಸ್ತಾಂತರಿಸಲು ದಕ್ಷಿಣ ಆಫ್ರಿಕಾ ನಿರಾಕರಿಸಿತ್ತು. ಬಳಿಕ (ನವೆಂಬರ್ 25ರಂದು) ಮಂಗಳವಾರ ದಕ್ಷಿಣ ಆಫ್ರಿಕಾದ ವಿದೇಶಾಂಗ ಇಲಾಖೆಯ ಕಚೇರಿಯಲ್ಲಿ ರಾಜತಾಂತ್ರಿಕ ಮಟ್ಟದಲ್ಲಿ ಅಧಿಕಾರ ಹಸ್ತಾಂತರ ಸದ್ದಿಲ್ಲದೆ ನಡೆದಿರುವುದಾಗಿ ವರದಿಯಾಗಿದೆ.




