ಕಾಸರಗೋಡು: ವಿದ್ಯುತ್ ಬಿಲ್ ಬಾಕಿ ಕಾರಣ ಕೆಎಸ್‍ಇಬಿ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಕಾಸರಗೋಡಿನ ವ್ಯಕ್ತಿಯೊಬ್ಬ ಟ್ರಾನ್ಸ್‍ಫಾರ್ಮರ್ ನಿಂದ ಸಂಪೂರ್ಣ ಪ್ಯೂಸ್‍ಗಳನ್ನು ತೆಗೆದು ಊರಿಡೀ ಕತ್ತಲು ಸೃಷ್ಟಿಸಿದ ಘಟನೆ ವರದಿಯಾಗಿದೆ. ಶುಕ್ರವಾರ ಸಂಜೆ ಕೆಎಸ್‍ಇಬಿಯ ನೆಲ್ಲಿಕುನ್ನು ಮತ್ತು ವಿದ್ಯಾನಗರ ವಿಭಾಗಗಳಿಂದ 23 ಫ್ಯೂಸ್‍ಗಳನ್ನು ತೆಗೆದು ಹತ್ತಿರದ ಪೆÇದೆಗೆ ಎಸೆದಿದ್ದಾನೆ.
ಇದರೊಂದಿಗೆ, ಕಾಸರಗೋಡು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಯಿತು. ದೂರಿನೊಂದಿಗೆ ಕೆಎಸ್‍ಇಬಿ ಕಚೇರಿಗಳಿಗೆ ಕರೆ ಮಾಡಿದಾಗ, ನೌಕರರು ಸಹ ಆಶ್ಚರ್ಯಚಕಿತರಾದರು. ಸಮಸ್ಯೆ ಏನೆಂದು ಕಂಡುಹಿಡಿಯಲು ಕೆಎಸ್‍ಇಬಿ ನೌಕರರು ಟ್ರಾನ್ಸ್‍ಫಾರ್ಮರ್‍ಗಳನ್ನು ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿತು. ನಂತರ, ಕೆಎಸ್‍ಇಬಿ ಅಧಿಕಾರಿಗಳ ದೂರಿನ ಮೇರೆಗೆ, ಕಾಸರಗೋಡು ನಗರ ಪೋಲೀಸರು ಬಳಕೆದಾರನೊಬ್ಬನನ್ನು ವಶಕ್ಕೆ ಪಡೆದರು.
ಪೋಲೀಸ್ ಠಾಣೆಯಲ್ಲಿ ಆತನನ್ನು ವಿಚಾರಿಸಿದ ನಂತರವೇ ಆತ ಮಾನಸಿಕ ಅಸ್ವಸ್ಥನೆಂದು ಮತ್ತು ಮನೆಯಲ್ಲಿ ತಂದೆ ಮಾತ್ರ ಇರುವುದಾಗಿ ತಿಳಿದುಬಂದಿದೆ. ಕಾಸರಗೋಡು ನಗರ ಇನ್ಸ್‍ಪೆಕ್ಟರ್ ನಳಿನಾಕ್ಷನ್ ಅವರು ಕೆಎಸ್‍ಇಬಿ ಅಧಿಕಾರಿಗಳು ದೂರು ನೀಡಿದ್ದರು ಆದರೆ ಲಿಖಿತ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.
ಎರಡು ದಿನಗಳ ಹಿಂದೆ, ಕುಟುಂಬಕ್ಕೆ 20,000 ರೂ. ಬಿಲ್ ಬಾಕಿ ಪಾವತಿಸಲು ನೋಟೀಸ್ ನೀಡಲಾಗಿತ್ತು. ಕೆಎಸ್‍ಇಬಿ ಅಧಿಕಾರಿಗಳು ಮೊದಲು ಅವರಿಗೆ ಎಚ್ಚರಿಕೆ ನೀಡಿದಾಗ, ಅವರು ನೌಕರರನ್ನು ಬೆದರಿಸುವ ಮೂಲಕ ಪ್ರತಿಕ್ರಿಯಿಸಿದರು. ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಕಚೇರಿಯಲ್ಲಿ ಬಾಕಿ ಬಿಲ್ ಮೊತ್ತವನ್ನು ಪಾವತಿಸಿದ ನಂತರ, ಹಿಂತಿರುಗುವಾಗ, ಅವರು ಟ್ರಾನ್ಸ್‍ಫಾರ್ಮರ್‍ಗಳಲ್ಲಿನ ಪ್ಯೂಸ್‍ಗಳನ್ನು ತೆಗೆದು ಕಾಡಿಗೆ ಎಸೆದರು.
ಘಟನೆಯಲ್ಲಿ ಲಕ್ಷಾಂತರ ನಷ್ಟವನ್ನು ಅಂದಾಜು ಮಾಡಲಾಗಿದೆ. ಪೋಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಕೆಎಸ್‍ಇಬಿ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯವಿರುವ ಪ್ಯೂಸ್ ಸಿಗದ ಕಾರಣ ತಂತಿಯನ್ನು ಬಳಸಿ ಪ್ಯೂಸ್ ಕಟ್ಟಿ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕವನ್ನು ಪುನಃಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.




