ವಾರಣಾಸಿ: ಬುಧವಾರ ಕಾಶಿಯ ಘಾಟ್‌ಗಳಲ್ಲಿ ಸುಮಾರು 25 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ದೇವ ದೀಪಾವಳಿಯನ್ನು ಆಚರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹರ ಹರ ಮಹಾದೇವ್ ಘೋಷಣೆಗಳ ನಡುವೆ ದೀಪ ಬೆಳಗಿಸುವ ಮೂಲಕ ಆಚರಣೆಯಲ್ಲಿ ಭಾಗವಹಿಸಿದರು.
ದಶಾಶ್ವಮೇಧ ಘಾಟ್‌ನಲ್ಲಿ ಅಮರ್ ಜವಾನ್ ಜ್ಯೋತಿಯ ಪ್ರತಿಕೃತಿಯನ್ನು ಸ್ಥಾಪಿಸಲಾಯಿತು. ಕಾರ್ಗಿಲ್ ಯುದ್ಧ ಮತ್ತು ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ್ದ ಸೈನಿಕರಿಗೆ ಗೌರವ ಸಲ್ಲಿಸಲಾಯಿತು.
ಈ ವರ್ಷದ ಉತ್ಸವವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯಾದ 'ಆಪರೇಷನ್ ಸಿಂಧೂರ'ಗೆ ಸಮರ್ಪಿಸಲಾಗಿದೆ ಎಂದು ಯುಪಿ ಸರ್ಕಾರದ ಹೇಳಿಕೆ ತಿಳಿಸಿದೆ.
ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇವ ದೀಪಾವಳಿಯ ಚಿತ್ರಗಳನ್ನು ಹಂಚಿಕೊಂಡು ಕಾಶಿಯಲ್ಲಿ ಅದ್ಭುತ ದೇವ ದೀಪಾವಳಿ! ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ 'ಬಾಬಾ ವಿಶ್ವನಾಥರ ಪವಿತ್ರ ನಗರವು ಇಂದು ದೇವ ದೀಪಾವಳಿಯ ಅನುಪಮ ಬೆಳಕಿನಿಂದ ಬೆಳಗುತ್ತಿದೆ. ಕಾಶಿಯ ಗಂಗಾ ನದಿಯ ತಟದಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸಲಾಗುತ್ತಿದೆ. ಎಲ್ಲರಿಗೂ ಸಂತಸ ಮತ್ತು ಸಮೃದ್ಧಿಯನ್ನು ಹಾರೈಸುತ್ತಿದೆ. ಈ ದೈವತ್ವ ಮತ್ತು ಭವ್ಯತೆ ಎಲ್ಲರ ಹೃದಯ ಮತ್ತು ಆತ್ಮವನ್ನು ಆಕರ್ಷಿಸುತ್ತದೆ'ಎಂದಿದ್ದಾರೆ.
ದೇವ ದೀಪಾವಳಿಯಂದು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಹರ ಹರ ಮಹಾದೇವ ಎಂದು ಪ್ರಧಾನಿ ಹೇಳಿದ್ದಾರೆ.
ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆವರಣ ಸೇರಿದಂತೆ ವಾರಾಣಸಿಯ ಘಾಟ್‌ಗಳನ್ನು ಸಂಜೆ 5.15ರ ನಂತರ ದೀಪಗಳಿಂದ ಬೆಳಗಿಸಲಾಗಿತ್ತು.
ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಕಾರ್ಯಕ್ರಮದ ವಿಡಿಯೊವನ್ನು ಹಂಚಿಕೊಂಡ ಮುಖ್ಯಮಂತ್ರಿ, ದೇವ ದೀಪಾವಳಿಯ ಪವಿತ್ರ ಹಬ್ಬಕ್ಕೆ ಹೃತ್ಪೂರ್ವಕ ಶುಭಾಶಯಗಳು ಎಂದು ಹೇಳಿದ್ದಾರೆ.
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್, 'ಗಂಗಾ ಆರತಿ'ಯ ಸಮಯದಲ್ಲಿ ಘಾಟ್‌ಗಳು ಜಪಗಳು ಮತ್ತು ಮಿನುಗುವ ದೀಪಗಳಿಂದ ತುಂಬಿದ್ದವು, ಇದು ದೈವಿಕ ವಾತಾವರಣವನ್ನು ಸೃಷ್ಟಿಸಿತು ಎಂದು ಬರೆದುಕೊಂಡಿದ್ದಾರೆ.




