ಪ್ರತಿ ದಿನ ಕನಿಷ್ಠ ನಾಲ್ಕು ಲಕ್ಷ ಜನರು ಭೇಟಿ ನೀಡುವ ಮತ್ತು ದೇಶದ ಅತ್ಯಂತ ದೊಡ್ಡ ಸಗಟು ಮಾರುಕಟ್ಟೆಯಾಗಿರುವ ಚಾಂದನಿ ಚೌಕ್ನಲ್ಲಿ ಪ್ರತಿ ದಿನ ಸುಮಾರು 450 ಕೋಟಿ ರೂ.ಗಳಿಂದ 500 ಕೋಟಿ ರೂ.ವರೆಗೆ ವ್ಯವಹಾರ ನಡೆಯುತ್ತದೆ.
ಸೋಮವಾರ ಈ ಪ್ರದೇಶಕ್ಕೆ ಅತಿ ಸಮೀಪದಲ್ಲಿ ಕಾರು ಸ್ಫೋಟಗೊಂಡ ಬಳಿಕ ಮಾರುಕಟ್ಟೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಸ್ಫೋಟದಲ್ಲಿ ಕನಿಷ್ಠ ಒಂಭತ್ತು ಜನರು ಮೃತಪಟ್ಟು ಕನಿಷ್ಠ 20 ಜನರು ಗಾಯಗೊಂಡಿದ್ದರು. ಇಲ್ಲಿಗೆ ಸಮೀಪದ ದೇವಸ್ಥಾನದ ಪ್ರದೇಶ ದ್ವಾರದ ಬಳಿಯೂ ಮಾನವ ಅಂಗಾಂಗಗಳು ಬಿದ್ದಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಆಗಿನಿಂದ ಮದುವೆಯ ಶಾಪಿಂಗ್ ಋತುವಿನ ಮಧ್ಯೆ ಮಾರುಕಟ್ಟೆಯಲ್ಲಿ ಜನರ ಆಗಮನವು ಕಡಿಮೆಯಾಗಿದೆ ಎಂದು ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದ ಚಾಂದನಿಚೌಕ್ ನ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು, ಮಾರುಕಟ್ಟೆಯಲ್ಲಿ ವ್ಯಾಪಾರವು ತಾತ್ಕಾಲಿಕವಾಗಿ 300ರಿಂದ 400 ಕೋಟಿ ರೂ.ಗಳಷ್ಟು ಕುಸಿದಿದೆ ಎಂದು ಹೇಳಿದರು.
ಆದರೆ ಸಹಜ ಸ್ಥತಿ ಮರಳಿ ಸಾರಿಗೆ ಪುನರಾರಂಭಗೊಂಡಾಗ ಗ್ರಾಹಕರು ಮರಳಲಿದ್ದಾರೆ. ನಮ್ಮ ಚಾಂದನಿ ಚೌಕ್ ವ್ಯಾಪಾರಿಗಳ ಉತ್ಸಾಹ ಎಂದೂ ಕುಗ್ಗುವುದಿಲ್ಲ. ಆಡಳಿತವು ತಪಾಸಣೆಗಾಗಿ ಮುಚ್ಚಿರುವ ಎರಡು ಮಾರುಕಟ್ಟೆಗಳನ್ನು ಹೊರತುಪಡಿಸಿದರೆ ಇಡೀ ಚಾಂದನಿ ಚೌಕ್ ಮಾರುಕಟ್ಟೆ ತೆರೆದಿದೆ ಎಂದು ಹೇಳಿದ ಅವರು,ಕೆಂಪು ಕೋಟೆ ಕಡೆಯಿಂದ ಚಾಂದನಿ ಚೌಕ್ ಗೆ ಪ್ರವೇಶವನ್ನು ಪೋಲಿಸರು ನಿರ್ಬಂಧಿಸಿರುವುದರಿಂದ ಚಿಲ್ಲರೆ ಗ್ರಾಹಕರ ಸಂಖ್ಯೆ ಖಂಡಿತವಾಗಿಯೂ ಕಡಿಮೆಯಾಗಿದೆ ಎಂದು ತಿಳಿಸಿದರು.
ಸಾರಿಗೆ ಇನ್ನೂ ಆರಂಭಗೊಂಡಿಲ್ಲ,ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗಿದೆ. ಬಸ್ಗಳು ಸಂಚರಿಸುತ್ತಿಲ್ಲ ಮತ್ತು ಖಾಸಗಿ ವಾಹನಗಳು ಇಲ್ಲಿ ಪ್ರವೇಶಿಸುವಂತಿಲ್ಲ, ಹೀಗಾಗಿ
ಗ್ರಾಹಕರು ಮಾರುಕಟ್ಟೆಗೆ ಬರುತ್ತಿಲ್ಲ ಎಂದ ಅವರು, ಆದರೆ ಇಲ್ಲಿಂದ ಸಗಟು ಖರೀದಿಯನ್ನು ಮಾಡುವವರು ಮಾರುಕಟ್ಟೆಗೆ ಬರುವ ಅಗತ್ಯವಿಲ್ಲ. ಅವರು ಫೋನ್ ಕರೆಗಳು ಅಥವಾ ಆನ್ಲೈನ್ ಮೂಲಕ ವ್ಯವಹಾರ ನಡೆಸಬಹುದು ಎಂದರು.




