ಶ್ರೀಹರಿಕೋಟಾ: ಹೊಸ ತಲೆಮಾರಿನ, ಸ್ವದೇಶಿ ನಿರ್ಮಿತ 'ಬಾಹುಬಲಿ' ರಾಕೆಟ್ ಮೂಲಕ ಅತ್ಯಂತ ಭಾರವಾದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ ಇಸ್ರೊ ಚಾರಿತ್ರಿಕ ಸಾಧನೆ ಮಾಡಿದೆ.
ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಸಂಜೆ 5.26ಕ್ಕೆ 4,410 ಕೆ.ಜಿ ತೂಕದ ಸಂವಹನ ಉಪಗ್ರಹವನ್ನು (ಸಿಎಂಎಸ್-03) ಹೊತ್ತು ನಭಕ್ಕೆ ಚಿಮ್ಮಿದ ಲಾಂಚ್ ವೆಹಿಕಲ್ ಮಾರ್ಕ್-3 (ಎಲ್‌ವಿಎಂ3-ಎಂ5) 'ಬಾಹುಬಲಿ'ಯು ಆತ್ಮನಿರ್ಭರ ಭಾರತದ ಅಭಿಮಾನದ ಕ್ಷಣಗಳಿಗೆ ಸಾಕ್ಷಿಯಾಯಿತು.
ದೇಶದ ಬಾಹ್ಯಾಕಾಶ ಕೇಂದ್ರದಿಂದ ಮೊದಲ ಬಾರಿಗೆ ಉಡ್ಡಯನ ಮಾಡಲಾಗುತ್ತಿರುವ ಭಾರಿ ತೂಕದ ಉಪಗ್ರಹ ಎಂಬ ಹೆಗ್ಗಳಿಕೆಗೆ 'ಸಿಎಂಎಸ್-03' ಪಾತ್ರವಾಯಿತು. ಇದರ ಉಡ್ಡಯನಕ್ಕೆ ಬಳಸಿದ ಭಾರಿ ಗಾತ್ರದ ರಾಕೆಟ್ (ಎಲ್‌ವಿಎಂ3-ಎಂ5) ಕೂಡ ತನ್ನ ಹೆಸರಿನ (ಬಾಹುಬಲಿ) ಹಿರಿಮೆಯನ್ನು ಹೆಚ್ಚಿಸಿತು.
ಕನಿಷ್ಠ 15 ವರ್ಷ ಕಾರ್ಯಾಚರಣೆ:
ಉಪಗ್ರಹವನ್ನು ಭೂಹೊಂದಾಣಿಕೆ ವರ್ಗಾವಣೆ ಕಕ್ಷೆಗೆ (ಜಿಟಿಒ) ಸೇರಿಸಲಾಗಿದ್ದು, ಇದು 2013ರಲ್ಲಿ ಉಡಾವಣೆ ಮಾಡಿದ 'ಜಿಎಸ್‌ಎಟಿ-7' ಸರಣಿಯ ಉಪಗ್ರಹಕ್ಕೆ ಬದಲಿಯಾಗಿ, ಮುಂದಿನ 15 ವರ್ಷಗಳವರೆಗೆ ಕಾರ್ಯನಿರ್ವಹಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
ಸಾಗರಯಾನಕ್ಕೆ ಹಾಗೂ ಭೂಮೇಲ್ಮೈನಲ್ಲಿ ನಡೆಯುವ ಚಟುವಟಿಕೆಗಳಿಗೆ ಅಗತ್ಯವಿರುವ ಸಂವಹನ ಸೇವೆಯನ್ನು ಈ ಉಪಗ್ರಹದ ಮೂಲಕ ನೀಡಲಾಗುತ್ತದೆ.
ಬಹುಬ್ಯಾಂಡ್ ಸಂವಹನ 'ಸಿಎಂಎಸ್-03'ನಿಂದ ಸಾಧ್ಯವಾಗಲಿದೆ. ಎಲ್‌ವಿಎಂ-3 ಮೂಲಕ ನಡೆದಿರುವ ಉಡಾವಣೆಗಳು ಶೇ 100ರಷ್ಟು ಯಶಸ್ಸಿನ ದರ ಹೊಂದಿವೆ. ಚಂದ್ರಯಾನ- 3ರ (3,841.4 ಕೆ.ಜಿ) ಉಡಾವಣೆ ನಂತರ ಈ ರಾಕೆಟ್, ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ.
4,410 ಕೆ.ಜಿ
ಉಪಗ್ರಹದ ತೂಕ
43.5 ಮೀಟರ್
ಉಡ್ಡಯನಕ್ಕೆ ಬಳಸಿದ ರಾಕೆಟ್‌ನ ಎತ್ತರ
15 ವರ್ಷ
ಕಾರ್ಯನಿರ್ವಹಣೆಯ ಅವಧಿ
-ವಿ. ನಾರಾಯಣನ್ ಇಸ್ರೊ ಅಧ್ಯಕ್ಷ ಸಂವಹನ ಉಪಗ್ರಹವನ್ನು 'ಬಾಹುಬಲಿ' ನಿಖರವಾಗಿ ಕಕ್ಷೆಗೆ ಸೇರಿಸಿದೆ. ಇದು ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ. ಇಸ್ರೊದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯಲ್ಲೂ 'ಎಲ್‌ವಿಎಂ-3' ಬಳಸುವ ಯೋಜನೆ ಇದ್ದು ಇದಕ್ಕೆ 'ಎಚ್‌ಆರ್‌ಎಲ್‌ವಿ' ಎಂದು ಹೆಸರಿಡಲಾಗಿದೆ. 2018ರಲ್ಲಿ ಜಿಸ್ಯಾಟ್-11 (5854 ಕೆ.ಜಿ) ಉಪಗ್ರಹವನ್ನು ಫ್ರೆಂಚ್ ಗಯಾನದಿಂದ ಉಡ್ಡಯನ ಮಾಡಲಾಗಿತ್ತು. 'ಎಚ್‌ಆರ್‌ಎಲ್‌ವಿ'ಯಲ್ಲೂ ಬಳಕೆ

