HEALTH TIPS

ಆಳ ಸಮುದ್ರಯಾನಕ್ಕೆ ಭಾರತ ಸಜ್ಜು: ಕರಾವಳಿಯಲ್ಲಿ 500 ಮೀಟರ್ ಆಳಕ್ಕಿಳಿಯಲು ಸಿದ್ಧತೆ

ಚೆನ್ನೈ: ಮಹತ್ವಾಕಾಂಕ್ಷೆಯ ಸಮುದ್ರಯಾನ ಯೋಜನೆಯ ಮೂಲಕ ಆಳ ಸಮುದ್ರದ ರಸಹ್ಯ ಭೇದಿಸಲು ಭಾರತ ಸಜ್ಜುಗೊಂಡಿದೆ. ಇದೇ ಯೋಜನೆಯ ಭಾಗವಾಗಿ ಮುಂದಿನ ವರ್ಷ ಚೆನ್ನೈ ಕರಾವಳಿಯಲ್ಲಿ ದೇಶದ ಉನ್ನತ ಸಾಗರ ಅಧ್ಯಯನ ಸಂಸ್ಥೆಯ ಇಬ್ಬರು ವಿಜ್ಞಾನಿಗಳು ಸಮುದ್ರದ 500 ಮೀಟರ್‌ ಆಳಕ್ಕಿಳಿಯಲಿದ್ದಾರೆ.

ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ (ಎನ್‌ಐಒಟಿ) ವಿಜ್ಞಾನಿಗಳಾದ ರಮೇಶ್‌ ರಾಜು ಹಾಗೂ ಜಿತೇಂದ್ರ ಪಾಲ್‌ ಸಿಂಗ್‌ ಅವರು ಆಳ ಸಮುದ್ರಯಾನಕ್ಕೆಂದೇ ದೇಶಿಯವಾಗಿ ನಿರ್ಮಿಸಿರುವ 28 ಟನ್ ತೂಕದ 'ಮತ್ಸ್ಯ-6000' ಹೆಸರಿನ ಸಬ್‌ಮರ್ಸಿಬಲ್‌ (ಸಮುದ್ರದಡಿ ಸಂಚರಿಸುವ ನೌಕೆ) ನೌಕೆಯಲ್ಲಿ ಸಮುದ್ರದ 500 ಮೀಟರ್ ಆಳಕ್ಕೆ ತೆರಳಿ ಅನ್ವೇಷಣೆ ನಡೆಸಲಿದ್ದಾರೆ.

ಎನ್‌ಐಒಟಿ ನಿರ್ದೇಶಕ ಬಾಲಾಜಿ ರಾಮಕೃಷ್ಣನ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, 'ರಿಮೋಟ್‌ ಆಧಾರಿತ ಮಾನವರಹಿತ ಸಾಧನಗಳ ಮೂಲಕ ಆಳ ಸಮುದ್ರ ಅನ್ವೇಷಣೆಯನ್ನು ನಾವು ನಡೆಸಿದ್ದೇವೆ. ಆದರೆ, ಇದೇ ಮೊದಲ ಬಾರಿಗೆ ಸಮುದ್ರದ 6000 ಮೀಟರ್‌ ಆಳಕ್ಕೆ ಮನುಷ್ಯರನ್ನು ಕಳುಹಿಸಿ ಅನ್ವೇಷಣೆ ನಡೆಸಲು ಉದ್ದೇಶಿಸಿದ್ದೇವೆ. ಇದರ ಮೊದಲ ಹಂತವಾಗಿ ತಜ್ಞರು 500 ಮೀಟರ್‌ ಆಳಕ್ಕೆ ತೆರಳುತ್ತಿದ್ದಾರೆ' ಎಂದಿದ್ದಾರೆ.

ಅಲ್ಲದೇ, '2027ರಲ್ಲಿ ಇದಕ್ಕಿಂತ 10 ಪಟ್ಟು ಆಳಕ್ಕೆ ತೆರಳಲು ಸಾಧ್ಯವಾಗಲಿದೆ. 6000 ಮೀಟರ್‌ ಆಳಕ್ಕೆ ತೆರಳಲು ಮತ್ಸ್ಯದಲ್ಲಿ ಪ್ರಸಕ್ತ ಇರುವ ಬಾಯ್ಲರ್‌ ಸ್ಟೀಲ್‌ ನೌಕಾ ಕೋಶ (ವಿಜ್ಞಾನಿಗಳು ಇರುವ ಜಾಗ) ಬದಲಿಸಿ, ಟೈಟಾನಿಯಂ ಕೋಶವನ್ನು ಅಳವಡಿಸಬೇಕಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿರುವ ಇಸ್ರೊದ ಲಿಕ್ವಿಡ್‌ ಪ್ರೊಪಲ್ಶನ್‌ ಸಿಸ್ಟಮ್‌ ಸೆಂಟರ್‌ನಲ್ಲಿ ಅದನ್ನು ಅಭಿವೃದ್ಧಿಪಡಿಸಲಾಗುತ್ತಿದೆ' ಎಂದೂ ಬಾಲಾಜಿ ಹೇಳಿದ್ದಾರೆ.

ಅತ್ಯಂತ ಆಳ ಸಮುದ್ರದಲ್ಲಿ ಮಾನವಸಹಿತ ಅನ್ವೇಷಣೆ ನಡೆಸುವ ಸಾಮರ್ಥ್ಯವು ಕೆಲವೇ ರಾಷ್ಟ್ರಗಳಲ್ಲಿದ್ದು, ಸಮುದ್ರಯಾನ ಯೋಜನೆ ಯಶಸ್ವಿಯಾದರೆ ಭಾರತವೂ ಈ ಸಾಲಿಗೆ ಸೇರ್ಪಡೆಯಾಗಲಿದೆ.

ಆಳ ಸಮುದ್ರಯಾನಕ್ಕೆಂದು ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಈ ನೌಕೆಯು ಪ್ರತಿ ನಿಮಿಷಕ್ಕೆ 30 ಮೀಟರ್‌ ಆಳದವರೆಗೆ ಸಂಚರಿಸಲಿದೆ. ಸಮುದ್ರದ ಆಳದಲ್ಲಿರುವ ಕತ್ತಲೆ ಭಾಗದಲ್ಲೂ ಅನ್ವೇಷಣೆಗೆ ಅನುವಾಗುವಂತೆ ದೀಪಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಜತೆಗೆ ಸಮುದ್ರದಲ್ಲಿ ಲಭ್ಯವಾಗುವ ಖನಿಜ ಸೇರಿದಂತೆ ಇತರೆ ವಸ್ತುಗಳ ಮಾದರಿಯನ್ನು ಸಂಗ್ರಹಿಸಲು ನೌಕೆಯಲ್ಲಿ ರೋಬೊಟಿಕ್‌ ಕೈಗಳೂ ಇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries