ನವದೆಹಲಿ: ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸುಪ್ರೀಂ ಕೋರ್ಸ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. 2027ರ ಫೆಬ್ರುವರಿ 9ರವರೆಗೆ ಇವರು ಸಿಜೆಐ ಆಗಿ ಮುಂದುವರಿಯಲಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾ.ಸೂರ್ಯ ಕಾಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇವರು ದೇವರ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಿದರು.
ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ನಿರ್ಗಮಿತ ಸಿಜೆಐ ಬಿ.ಆರ್. ಗವಾಯಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಪ್ರಮುಖ ಖಾತೆಗಳ ಸಚಿವರು, ಲೋಕಸಭೆ ಸ್ವೀಕರ್ ಓಂ ಬಿರ್ಲಾ ಮತ್ತು ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನ್ಯಾ. ಸೂರ್ಯ ಕಾಂತ್ ಅವರ ಕುಟುಂಬಸ್ಥರೂ ಇದ್ದರು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುಪ್ರೀಂ ಕೋರ್ಟ್‌ಗೆ ತೆರಳಿದ ನೂತನ ಸಿಜೆಐ ಸೂರ್ಯ ಕಾಂತ್ ಅವರು, ಕೋರ್ಟ್ ಆವರಣದಲ್ಲಿ ಇರುವ ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಹೂವಿನ ಹಾರ ಹಾಕಿ ಗೌರವ ಸಮರ್ಪಿಸಿದರು.
ಕೊಲಿಜಿಯಂ ಮುಖ್ಯಸ್ಥ: ನ್ಯಾ. ಗವಾಯಿ ಅವರ ಬಳಿಕ ಐವರು ನ್ಯಾಯಮೂರ್ತಿಗಳ ಕೊಲಿಜಿಯಂಗೆ ಈಗ ಸಿಜೆಐ ಸೂರ್ಯ ಕಾಂತ್ ಅವರು ಮುಖ್ಯಸ್ಥರಾಗಿದ್ದಾರೆ. ಕೊಲಿಜಿಯಂನಲ್ಲಿ ಸದ್ಯ ನ್ಯಾಯಮೂರ್ತಿಗಳಾದ ವಿಕ್ರಂ ನಾಥ್, ಬಿ.ವಿ. ನಾಗರತ್ನ, ಜೆ.ಕೆ. ಮಾಹೇಶ್ವರಿ ಮತ್ತು ಎಂ.ಎಂ ಸುಂದರೇಶ್ ಇದ್ದಾರೆ.
ಸಿಜೆಐ ಬಗ್ಗೆ...
* ಹರಿಯಾಣದ ಹಿಸ್ನಾರ್‌ನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸಿಜೆಐ ಸೂರ್ಯ ಕಾಂತ್ ತಮ್ಮ ಕುಟುಂಬದಲ್ಲಿಯೇ ಕಾನೂನು ಪದವಿ ಓದಿದ ಮೊದಲಿಗರು. ಸಿಜೆಐ ಹುದ್ದೆಗೇರಿದ ಹರಿಯಾಣ ರಾಜ್ಯದ ಮೊದಲಿಗರೂ ಆಗಿದ್ದಾರೆ.
* ತಮ್ಮ 38ನೇ ವಯಸ್ಸಿಗೆ ಹರಿಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡವರು.
* ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾನೂನು ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ (ಶೇ 70 ಅಂಕಕ್ಕೂ ಹೆಚ್ಚು) ತೇರ್ಗಡೆಗೊಂಡವರು.
ಅಧಿಕೃತ ಕಾರಿನಲ್ಲಿ ಬಂದು ಸ್ವಂತ ಕಾರಿನಲ್ಲಿ ತೆರಳಿದ ನ್ಯಾ. ಗವಾಯಿ
ನಿರ್ಗಮಿತ ಸಿಜೆಐ ಬಿ.ಆರ್. ಗವಾಯಿ ಅವರು ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ. ಮರ್ಸಿಡಿಸ್ ಬೆಂಜ್ ಕಾರನ್ನು ಸಿಜೆಐ ಅವರ ಅಧಿಕೃತ ಓಡಾಟಕ್ಕಾಗಿ ನೀಡಲಾಗಿರುತ್ತದೆ. ನ್ಯಾ. ಗವಾಯಿ ಅವರು ಸಮಾರಂಭಕ್ಕೆ ಇದೇ ಕಾರಿನಲ್ಲಿ ಬಂದಿದ್ದರು. ಆದರೆ ವಾಪಸು ಮನೆಗೆ ಹೋಗುವಾಗ ಬೆಂಜ್ ಕಾರನ್ನು ನೂತನ ಸಿಜೆಐ ಅವರಿಗೆ ನೀಡಿ ತಾವು ತಮ್ಮ ಸ್ವಂತ ಕಾರಿನಲ್ಲಿ ತೆರಳಿದರು. ಸಚಿವಾಲಯದ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ಹಂಚಿಕೊಂಡರು. 'ಹೊಸ ಸಿಜೆಐ ಅವರು ಸುಪ್ರೀಂ ಕೋರ್ಟ್‌ಗೆ ಬೆಂಜ್ ಕಾರಿನಲ್ಲಿಯೇ ತೆರಳಲಿ ಎಂದು ನ್ಯಾ. ಗವಾಯಿ ಅವರು ಸಮಾರಂಭದ ಬಳಿಕ ತಮ್ಮ ಸ್ವಂತ ಕಾರಿನಲ್ಲಿ ಮನೆಗೆ ತೆರಳಿದರು' ಎಂದರು.
ನನ್ನ ಆದ್ಯತೆ ಏನು?: ಸಿಜೆಐ ಹೇಳಿದ್ದು
* ದೇಶದಾದ್ಯಾಂತ ವಿವಿಧ ಕೋರ್ಟ್‌ಗಳಲ್ಲಿ 5 ಕೋಟಿ ಪ್ರಕರಣಗಳು ಬಾಕಿ ಇವೆ. ಸುಪ್ರೀಂ ಕೋರ್ಟ್‌ನಲ್ಲೇ 90 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ಇಂಥ ಪ್ರಕರಣಗಳ ವಿಲೇವಾರಿಯೇ ನನ್ನ ಮೊದಲ ಆದ್ಯತೆ. ಪ್ರಕರಣಗಳು ಯಾಕಾಗಿ ಬಾಕಿ ಇವೆ ಎನ್ನುವ ಬಗ್ಗೆ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳಿಂದ ಮಾಹಿತಿ ಪಡೆಯುತ್ತೇನೆ
* ಎರಡನೆಯದ್ದು ಮಧ್ಯಸ್ಥಿಕೆ. ವಿವಾದಗಳನ್ನು ಮಧ್ಯಸ್ಥಿಕೆ ಮೂಲಕ ಸುಲಭವಾಗಿ ಬಗೆಹರಿಸಬಹುದು. ಇದು ನಿಜಕ್ಕೂ ಕ್ರಾಂತಿಕಾರಿ ಹೆಜ್ಜೆಯಾಗಲಿದೆ. ಪ್ರಧಾನಿ ಮೋದಿ ಅವರೂ ಇದನ್ನೇ ಇತ್ತೀಚೆಗೆ ಹೇಳಿದ್ದರು. ಈಗ ಇಡೀ ದೇಶವೇ ಇದರ ಬಗ್ಗೆ ಮಾತನಾಡುತ್ತಿದೆ
* ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾದ ಬಳಿಕ ಸಿಜೆಐ ಆದ ಬಳಿಕ ಆನ್‌ಲೈನ್ ಟ್ರೋಲಿಂಗ್ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನಿಜ ಹೇಳುತ್ತೇನೆ ಇದು ಸಾಮಾಜಿಕ ಜಾಲತಾಣವಲ್ಲ. ಇದು ಸಮಾಜವೇ ಇಲ್ಲದ ಜಾಲತಾಣ (ಅನ್‌ಸೋಷಿಯಲ್ ಮೀಡಿಯಾ). ಅಲ್ಲಿ ಮಾಡುವ ಕಮೆಂಟ್‌ಗಳಿಂದ ನಾನು ಒತ್ತಡಕ್ಕೆ ಒಳಗಾಗುವುದಿಲ್ಲ. ನ್ಯಾಯಯುತ ವಿಶ್ಲೇಷಣೆ ಮಾತ್ರವೇ ಸ್ವೀಕಾರಾರ್ಹ
'ತುರ್ತು ವಿಚಾರಣೆಗೆ ಅನುಮತಿ: ಬಾಯಿಮಾತು ಸಾಲದು'
'ಯಾವುದೇ ಪ್ರಕರಣವನ್ನು ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಇನ್ನು ಮುಂದೆ ಕಡ್ಡಾಯವಾಗಿ ಲಿಖಿತ ರೂಪದಲ್ಲಿಯೇ ಕೋರಬೇಕು. ವಕೀಲರು ಬಾಯಿಮಾತಿನಲ್ಲಿ ಹೇಳುವಂತಿಲ್ಲ' ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಸಿಜೆಐ ಸೂಚಿಸಿದರು.
ಸಿಜೆಐ ಸೂರ್ಯ ಕಾಂತ್ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನ 17 ಪ್ರಕರಣಗಳ ವಿಚಾರಣೆ ನಡೆಸಿದರು.
'ಮರಣ ದಂಡನೆ ವ್ಯಕ್ತಿ ಸ್ವಾತಂತ್ರ ಕುರಿತ ಪ್ರಕರಣಗಳಿಗೆ ಮಾತ್ರ ವಿನಾಯಿತಿ ಇದೆ. ಲಿಖಿತವಾಗಿ ಸಲ್ಲಿಸಿದ ಪ್ರಕರಣಗಳನ್ನು ವಿಶ್ಲೇಷಿಸಿ ಅವುಗಳನ್ನು ತುರ್ತು ವಿಚಾರಣೆ ಕೈಗೆತ್ತಿಕೊಳ್ಳಬೇಕೇ? ಬೇಡವೇ? ಎಂದು ನಿರ್ಧರಿಸಲಾಗುವುದು' ಎಂದರು. ಈ ಹಿಂದೆ ಸಿಜೆಐ ಆಗಿದ್ದ ನ್ಯಾ. ಸಂಜೀವ್ ಖನ್ನಾ ಅವರೂ ಇಂಥದ್ದೇ ನಿಯಮ ರೂಪಿಸಿದ್ದರು. ಆದರೆ ನ್ಯಾ. ಖನ್ನಾ ಅವರ ಬಳಿಕ ಬಂದ ನ್ಯಾ. ಗವಾಯಿ ಅವರು ಈ ನಿಯಮವನ್ನು ಸಡಿಲಗೊಳಿಸಿದ್ದರು.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷನಮ್ಮ ನ್ಯಾಯಾಂಗ ವ್ಯವಸ್ಥೆಯು ನಿರ್ಣಾಯಕ ಘಟ್ಟ ತಲುಪಿರುವಾಗ ನ್ಯಾ. ಸೂರ್ಯ ಕಾಂತ್‌ಅವರು 14 ತಿಂಗಳವರೆಗಿನ ತಮ್ಮ ಅಧಿಕಾರಾವಧಿಯನ್ನು ಆರಂಭಿಸುತ್ತಿದ್ದಾರೆ. ಇವರ ನಾಯಕತ್ವದಲ್ಲಿ ಸಾಂವಿಧಾನಿಕ ಮೌಲ್ಯಗಳು ಸಂಸ್ಥೆಗಳು ಬಲಗೊಳ್ಳುತ್ತದೆ ಎಂಬ ಭರವಸೆ ಇದೆ-ಶೆಹಜಾದ್ ಪೂನಾವಾಲ, ಬಿಜೆಪಿ ರಾಷ್ಟ್ರೀಯ ವಕ್ತಾರಸಮಾರಂಭದಲ್ಲಿ ಮೋದಿ ಅವರ ಇಡೀ ಸಂಪುಟವೇ ಭಾಗವಹಿಸಿತ್ತು. ಆದರೆ ಅವರು (ರಾಹುಲ್ ಗಾಂಧಿ) ಸಮಾರಂಭವನ್ನು ಬಹಿಷ್ಕರಿಸಿದರು. ಅವರು ಯಾವುದೋ ವಿದೇಶಿ ಪ್ರವಾಸದಲ್ಲಿರಬಹುದು ಅಥವಾ ಸಫಾರಿಗೆ ತೆರಳಿರಬಹುದು.
ಹಿಂದಿನ ಸಿಜೆಐ ಬಿ.ಆರ್. ಗವಾಯಿ ಅವರು ನೂತನ ಸಿಜೆಐ ಅವರಿಗೆ ಶುಭಾಶಯ ಕೋರಿದ ಕ್ಷಣ -ಪಿಟಿಐ ಚಿತ್ರ.




