ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಒಟ್ಟು ಶೇ. 65.08ರಷ್ಟು ಮತ ಚಲಾವಣೆಯಾಗಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಅತ್ಯಧಿಕವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ನವೆಂಬರ್ 6ರಂದು ನಡೆದ ಪ್ರಥಮ ಹಂತದ ಮತದಾನದಲ್ಲಿ 121 ಕ್ಷೇತ್ರಗಳ 45,341 ಮತಗಟ್ಟೆಗಳಲ್ಲಿ ಒಟ್ಟು 3.75 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಈ ಪೈಕಿ 36,733 ಮತಗಟ್ಟೆಗಳು ಗ್ರಾಮಾಂತರ ಪ್ರದೇಶಕ್ಕೆ ಸೇರಿವೆ. ಗುರುವಾರ ಮತದಾನ ನಡೆದ 122 ಕ್ಷೇತ್ರಗಳಲ್ಲಿ ಒಟ್ಟು 1,314 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈ ಪೈಕಿ 1,192 ಮಂದಿ ಪುರುಷ ಅಭ್ಯರ್ಥಿಗಳು ಹಾಗೂ 122 ಮಂದಿ ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ.
ಬಿಹಾರದ ಮುಖ್ಯ ಚುನಾವಣಾಧಿಕಾರಿ ನೀಡಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಗುರುವಾರ ಬಿಹಾರದಲ್ಲಿ ಐತಿಹಾಸಿಕ ಮತದಾನವಾಗಿದ್ದು, ಶೇ. 65.08ರಷ್ಟು ಮತ ಚಲಾವಣೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಇದು ಶೇ. 7.79ರಷ್ಟು ಅಧಿಕ ಮತದಾನವಾಗಿದೆ. 2020ರ ಚುನಾವಣೆಯಲ್ಲಿ ಶೇ. 57.29ರಷ್ಟು ಮತದಾರರು ಮಾತ್ರ ತಮ್ಮ ಮತ ಚಲಾಯಿಸಿದ್ದರು.
ಗುರುವಾರ ನಡೆದ ಮೊದಲ ಹಂತದ ಮತದಾನದಲ್ಲಿ ಒಟ್ಟು 3.75 ಕೋಟಿಯಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದು, ಈ ಪೈಕಿ 1.98 ಕೋಟಿ ಪುರುಷ ಮತದಾರರು ಹಾಗೂ 1.76 ಕೋಟಿ ಮಹಿಳಾ ಮತದಾರರು ಸೇರಿದ್ದಾರೆ. ಮೊದಲ ಹಂತದ ಮತದಾನದಲ್ಲಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಮತ ಚಲಾಯಿಸಿದರು ಎಂದು ವರದಿಯಾಗಿದೆ.
ಮೊದಲ ಹಂತದ ಮತದಾನದಲ್ಲಿ ಮುಝಾಫ್ಫರ್ ಪುರ್ ಹಾಗೂ ಸಮಷ್ಠಿಪುರ ಜಿಲ್ಲೆಗಳಲ್ಲಿ ಶೇ. 70ಕ್ಕಿಂತ ಹೆಚ್ಚು ಮತದಾನವಾಗಿದೆ. ಈ ಪೈಕಿ ಮುಝಾಫ್ಫರ್ ಪುರ್ ನಲ್ಲಿ ಶೇ. 71.81ರಷ್ಟು ಮತದಾನವಾಗಿದ್ದರೆ, ಸಮಷ್ಠಿಪುರ್ ಜಿಲ್ಲೆಯಲ್ಲಿ ಶೇ. 71.74ರಷ್ಟು ಮತದಾನವಾಗಿದೆ.
ಮಾಧೇಪುರ (ಶೇ. 69.59), ಸಹರ್ಸ (ಶೇ. 69.38), ವೈಶಾಲಿ (ಶೇ. 68.50) ಹಾಗೂ ಖಗಾರಿಯಾದಲ್ಲಿ ಶೇ. 67.90 ಮತದಾನವಾಗಿದೆ. ಇನ್ನು, ಪಾಟ್ನಾ ಜಿಲ್ಲೆಯಲ್ಲಿ ಶೇ. 59.02, ಲಖಿಸರಾಯಿ ಜಿಲ್ಲೆಯಲ್ಲಿ ಶೇ. 64.98, ಮುಂಗರ್ ಜಿಲ್ಲೆಯಲ್ಲಿ ಶೇ. 62.74 ಹಾಗೂ ಸಿವಾನ್ ಜಿಲ್ಲೆಯಲ್ಲಿ ಶೇ. 60.61ರಷ್ಟು ಮತದಾನವಾಗಿದೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ, ಇನ್ನುಳಿದ 122 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 11ರಂದು ಮತದಾನ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.




