HEALTH TIPS

ಶೇ.80ರಷ್ಟು ಭಿನ್ನಸಾಮರ್ಥ್ಯದವರಿಗಿಲ್ಲ ಆರೋಗ್ಯ ವಿಮೆಯ ರಕ್ಷಣೆ: ಎನ್‌ಜಿಓ ವರದಿ

ನವದೆಹಲಿ: ಶೇ.80ರಷ್ಟು ಭಿನ್ನಸಾಮರ್ಥ್ಯದ ಭಾರತೀಯರು ವಿಮೆಯನ್ನು ಹೊಂದಿಲ್ಲ ಹಾಗೂ ಆರೋಗ್ಯ ವಿಮೆಯು ಎಲ್ಲರಿಗೂ ಸಾಮಾನ್ಯವಾಗಿ ಲಭ್ಯವಾಗುವುದನ್ನು ಖಾತರಿಪಡಿಸುವಂತಹ ಕಾನೂನುಗಳಿರುವ ಹೊರತಾಗಿಯೂ, ವಿಮೆಗಾಗಿ ಅರ್ಜಿ ಸಲ್ಲಿಸಿರುವ ಅರ್ಧಾಂಶಕ್ಕಿಂತಲೂ ಅಧಿಕ ಭಿನ್ನಸಾಮರ್ಥ್ಯದ ವ್ಯಕ್ತಿಗಳ ಅಹವಾಲುಗಳು ತಿರಸ್ಕೃತವಾಗಿವೆ ಎಂದು ಗುರುವಾರ ಬಿಡುಗಡೆಯಾದ ನೂತನ ಶ್ವೇತಪತ್ರವೊಂದು ತಿಳಿಸಿದೆ.

ನವದೆಹಲಿಯಲ್ಲಿ ಭಿನ್ನಸಾಮರ್ಥ್ಯದ ವ್ಯಕ್ತಿಗಳಿಗೆ ಉದ್ಯೋಗಕ್ಕೆ ಉತ್ತೇಜನಕ್ಕಾಗಿನ ರಾಷ್ಟ್ರೀಯ ಕೇಂದ್ರ ( ಎನ್‌ಪಿಇಡಿಪಿ) ಗುರುವಾರ ಆಯೋಜಿಸಿದ ದುಂಡುಮೇಜಿನ ಸಮಾವೇಶದಲ್ಲಿ ''ಎಲ್ಲರನ್ನೂ ಒಳಪಡಿಸಿದ ಆರೋಗ್ಯ: ಭಿನ್ನಸಾಮರ್ಥ್ಯ, ತಾರತಮ್ಯ ಹಾಗೂ ಭಾರತದಲ್ಲಿ ಆರೋಗ್ಯ ವಿಮೆ'' ಶೀರ್ಷಿಕೆಯ ಶ್ವೇತಪತ್ರವನ್ನು ಬಿಡುಗಡೆಗೊಳಿಸಲಾಯಿತು. ಸಂಸದರು, ಶಾಸಕರು, ವಿಮಾದಾರರು ಹಾಗೂ ಭಿನ್ನಸಾಮರ್ಥ್ಯದ ಹಕ್ಕುಗಳ ಪ್ರತಿಪಾದಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

34 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ್ಯಂ 5 ಸಾವಿರಕ್ಕೂ ಅಧಿಕ ಭಿನ್ನಸಾಮರ್ಥ್ಯದವರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಸಾರ್ವಜನಿಕ ಹಾಗೂ ಖಾಸಗಿ ವಿಮಾ ಯೋಜನೆಗಳು ಸುಮಾರು 16 ಕೋಟಿ ಭಿನ್ನಸಾಮರ್ಥ್ಯದ ಭಾರತೀಯರಿಗೆ ಲಭಿಸದಂತೆ ಮಾಡುವುದು ಮುಂದುವರಿದಿದೆ ಎಂದು ಶ್ವೇತಪತ್ರದಲ್ಲಿ ಗಮನಸೆಳೆಯಲಾಗಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.80 ಮಂದಿ ತಮಗೆ ಯಾವುದೇ ಆರೋಗ್ಯ ವಿಮೆ ಇಲ್ಲವೆಂದು ಹೇಳಿದ್ದಾರೆ. ಇವರ ಪೈಕಿ ಆರೋಗ್ಯವಿಮೆಗಾಗಿ ಅರ್ಜಿ ಸಲ್ಲಿಸಿದ ಶೇ.53 ಮಂದಿಯ ಅರ್ಜಿಗಳು ತಿರಸ್ಕೃತವಾಗಿದ್ದವು.

ಅಂಗವೈಕಲ್ಯ ಅಥವಾ ಈ ಮೊದಲೇ ಇದ್ದ ದೈಹಿಕ ಪರಿಸ್ಥಿತಿಯ ಕಾರಣದಿಂದಾಗಿ ತಮ್ಮ ಅರ್ಜಿಗಳು ತಿರಸ್ಕೃತವಾಗಿತ್ತೆಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಹಲವಾರು ಮಂದಿ ದೂರಿದ್ದಾರೆ. ಆಟಿಸಂ, ಮನೋಸಾಮಾಜಿಕ ಹಾಗೂ ಬೌದ್ಧಿಕ ಭಿನ್ನಸಾಮರ್ಥ್ಯ ಹಾಗೂ ಥಲಸ್ಸೆಮಿಯಾದಂತಹ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಜಿದಾರರು ಹೊಂದಿದ್ದ ಕಾರಣದಿಂದಾಗಿ ಈ ಅರ್ಜಿಗಳು ತಿರಸ್ಕೃತಗೊಂಡಿದ್ದವು.

ಭಿನ್ನಸಾಮರ್ಥ್ಯದ ವ್ಯಕ್ತಿಗಳಿಗೆ ಸಾಂವಿಧಾನಿಕ ರಕ್ಷಣೆ ಹಾಗೂ 2016ರ ಭಿನ್ನಸಾಮರ್ಥ್ಯದ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, ಅಲ್ಲದೆ ಭಾರತೀಯ ವಿಮಾನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು ಪುನರಾವರ್ತಿತ ನಿರ್ದೇಶನಗಳನ್ನು ಹೊರಡಿಸಿರುವ ಹೊರತಾಗಿಯೂ ಪರಿಸ್ಥಿತಿ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

ದುಬಾರಿ ಪ್ರೀಮಿಯಂಗಳು, ಡಿಜಿಟಲ್ ವೇದಿಕೆಗಳ ಅಲಭ್ಯತೆ ಹಾಗೂ ಆರೋಗ್ಯ ವಿಮಾ ಯೋಜನೆಗಳ ಕುರಿತ ಮಾಹಿತಿಯ ಕೊರತೆಯು ಭಿನ್ನಸಾಮರ್ಥ್ಯದ ವ್ಯಕ್ತಿಗಳು ಈ ಯೋಜನೆಯನ್ನು ಪಡೆಯುವುದಕ್ಕೆ ಪ್ರಮುಖ ಅಡೆತಡೆಗಳಾಗಿವೆ ಎಂದು ವರದಿ ತಿಳಿಸಿದೆ.

ಸಾಮಾಜಿಕ ಕಲ್ಯಾಣ ಹಾಗೂ ಸಬಲೀಕರಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನಮೀತ್ ನಂದಾ ಮಾತನಾಡಿ, ಭಿನ್ನಸಾಮರ್ಥ್ಯದ ವ್ಯಕ್ತಿಗಳಿಗೆ ಆರೋಗ್ಯ ವಿಮೆ ಲಭ್ಯವಾಗುವಂತೆ ಮಾಡಲು ತಂತ್ರಜ್ಞಾನದ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಹಾಗೂ ಸಚಿವಾಲಯಗಳ ಮಟ್ಟದಲ್ಲಿ ಸಮನ್ವಯತೆಯನ್ನು ಕಾಪಾಡಲಾಗುವುದು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries