ಈಗ 2025, ಅ.17ಕ್ಕೆ ಇದ್ದಂತೆ ಕರೆನ್ಸಿ ಪ್ರಮಾಣ 37.29 ಲಕ್ಷ ಕೋಟಿ ರೂ.ಗಳಿಗೇರಿದೆ. ಆದಾಗ್ಯೂ ಪ್ರತಿ ವರ್ಷ ಶೇ.6ಕ್ಕೂ ಹೆಚ್ಚಿನ ಬೆಳವಣಿಗೆಯೊಂದಿಗೆ ಆರ್ಥಿಕತೆಯ ಗಾತ್ರವೂ ವಿಸ್ತರಿಸಿದ್ದು, ಇದರಿಂದಾಗಿ ಚಲಾವಣೆಯಲ್ಲಿರುವ ಕರೆನ್ಸಿ ಮತ್ತು ಜಿಡಿಪಿ ಅನುಪಾತ ನೋಟು ನಿಷೇಧ ಪೂರ್ವಕ್ಕಿಂತ ಕೆಳಗಿನ ಮಟ್ಟಕ್ಕೆ ಇಳಿದಿದೆ ಎಂದು indianexpress.com ವರದಿ ಮಾಡಿದೆ.
ನೋಟು ನಿಷೇಧದ ಬಳಿಕ ದೇಶದ ಆರ್ಥಿಕತೆ ಅಸ್ತವ್ಯಸ್ತಗೊಂಡಿತ್ತು. ಬೇಡಿಕೆ ಕುಸಿದಿತ್ತು, ವ್ಯವಹಾರಗಳು ಬಿಕ್ಕಟ್ಟಿಗೆ ಸಿಲುಕಿದ್ದವು ಮತ್ತು ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಸುಮಾರು ಶೇ.1.5ರಷ್ಟು ಇಳಿಕೆಯಾಗಿತ್ತು.
ಆರ್‌ಬಿಐ ವ್ಯಾಖ್ಯಾನದ ಪ್ರಕಾರ ನೋಟುಗಳು ಮತ್ತು ನಾಣ್ಯಗಳು ಸೇರಿದಂತೆ ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿಯಿಂದ(ಸಿಐಸಿ) ಬ್ಯಾಂಕುಗಳಲ್ಲಿರುವ ಹಣವನ್ನು ಕಳೆಯುವ ಮೂಲಕ ಸಾರ್ವಜನಿಕರ ಬಳಿಯಲ್ಲಿರುವ ಕರೆನ್ಸಿಯನ್ನು ಲೆಕ್ಕ ಹಾಕಲಾಗುತ್ತದೆ. ಅ.17ಕ್ಕೆ ಕೊನೆಗೊಂಡ 15 ದಿನಗಳ ಅವಧಿಯಲ್ಲಿ ಸಾರ್ವಜನಿಕರ ಬಳಿಯಿರುವ ನಗದು ಹಣ 30,709 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ ಮತ್ತು ವರ್ಷದಿಂದ ವರ್ಷಕ್ಕೆ 3.13 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.
ವಿತ್ತವರ್ಷ 2026ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಸದೃಢವಾಗಿದ್ದು,ಶೇ.7.8ರ ಮಟ್ಟವನ್ನೂ ತಲುಪಿದ್ದರಿಂದ ಸಂಪೂರ್ಣ ಸಂಖ್ಯೆಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಯಲ್ಲಿನ ಏರಿಕೆಯು ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ. 2016ರಲ್ಲಿ ನೋಟು ನಿಷೇಧದ ಬಳಿಕ ಚಲಾವಣೆಯಲ್ಲಿರುವ ಕರೆನ್ಸಿಯಲ್ಲಿ ಪ್ರತಿ ವರ್ಷ ಏರಿಕೆಯಾಗಿದೆ. 2016-17ರಲ್ಲಿ ಶೇ.8.7ರಷ್ಟಿದ್ದ ಸಿಐಸಿ ಮತ್ತು ಜಿಡಿಪಿ ಅನುಪಾತವು 2020-21ರಲ್ಲಿ ಶೇ.14.5ಕ್ಕೆ ಏರಿಕೆಯಾಗಿತ್ತು. ಮಾರ್ಚ್ 2016ರಲ್ಲಿ ಶೇ.12.1ರಷ್ಟಿದ್ದ ಈ ಅನುಪಾತವು 2025ರಲ್ಲಿ ಶೇ.11.11ಕ್ಕೆ ಇಳಿದಿದೆ. ಹೆಚ್ಚಿನ ಸಿಐಸಿ-ಜಿಡಿಪಿ ಅನುಪಾತವು ವಹಿವಾಟುಗಳಿಗಾಗಿ ಜನರು ಮತ್ತು ವ್ಯವಹಾರಗಳ ನಗದು ಹಣದ ಮೇಲಿನ ಹೆಚ್ಚಿನ ಅವಲಂಬನೆಯನ್ನು ಸೂಚಿಸುತ್ತದೆ ಮತ್ತು ಕಡಿಮೆ ಅನುಪಾತವು ಡಿಜಿಟಲ್ ಪಾವತಿಗಳು,ಬ್ಯಾಂಕ್ ಮೂಲಕ ವಹಿವಾಟುಗಳು ಮತ್ತು ಔಪಚಾರಿಕ ಹಣಕಾಸು ವ್ಯವಸ್ಥೆಗಳತ್ತ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.
ಸರಕಾರ ಮತ್ತು ಆರ್‌ಬಿಐ ಕಡಿಮೆ ನಗದು ವ್ಯವಹಾರ, ಪಾವತಿಗಳ ಡಿಜಿಟಲೀಕರಣಕ್ಕೆ ಒತ್ತು ನೀಡಿ ವಿವಿಧ ವಹಿವಾಟುಗಳಲ್ಲಿ ನಗದು ಹಣದ ಬಳಕೆಯ ಮೇಲೆ ನಿರ್ಬಂಧಗಳನ್ನು ಹೇರಿದ್ದರೂ ಈಗಲೂ ವ್ಯವಸ್ಥೆಯಲ್ಲಿ ನಗದು ಹಣವು ರಾಜನಾಗಿಯೇ ಉಳಿದುಕೊಂಡಿದೆ.
ಡಿಜಿಟಲ್ ವಹಿವಾಟುಗಳತ್ತ ಹೆಚ್ಚುತ್ತಿರುವ ಒಲವಿಗೆ ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಪ್ರಮುಖ ಚಾಲಕ ಶಕ್ತಿಯಾಗಿದ್ದು,ವಿತ್ತವರ್ಷ 26ರ ಮೊದಲ ತ್ರೈಮಾಸಿಕದಲ್ಲಿ 54.9 ಶತಕೋಟಿ ಮತ್ತು ವಿತ್ತವರ್ಷ 25ರಲ್ಲಿ 185.9 ಶತಕೋಟಿ ವಹಿವಾಟುಗಳು ನಡೆದಿವೆ.
ಯುಪಿಐ ತನ್ನ ಕ್ಷಿಪ್ರ ಬೆಳವಣಿಗೆಯನ್ನು ಮುಂದುವರಿಸುವ ನಿರೀಕ್ಷೆಯಿದ್ದು,ಭಾರತದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಸುಭದ್ರಗೊಳಿಸಲಿದೆ ಎಂದು ಕೇರ್‌ಎಡ್ಜ್ ರೇಟಿಂಗ್ಸ್ ತನ್ನ ವರದಿಯಲ್ಲಿ ಹೇಳಿದೆ.




