HEALTH TIPS

AIನತ್ತ ಒಲವು, 2028ರ ವೇಳೆಗೆ ನಾಲ್ಕರಿಂದ ಆರು ಸಾವಿರ ಉದ್ಯೋಗ ಕಡಿತಕ್ಕೆ HP ಸಜ್ಜು!

ಕ್ಯಾಲಿಫೋರ್ನಿಯಾ: 2028ರ ವಿತ್ತವರ್ಷದ ವೇಳೆಗೆ ಜಾಗತಿಕವಾಗಿ 4,000ದಿಂದ 6,000ದಷ್ಟು ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಿರುವುದಾಗಿ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ HP ಇಂಕ್ ಮಂಗಳವಾರ ಪ್ರಕಟಿಸಿದೆ. ತನ್ಮೂಲಕ ಕೃತಕ ಬುದ್ಧಿಮತ್ತೆ (AI) ಸಾಧನಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಭರದಿಂದ ಸಾಗುತ್ತಿರುವ ತಂತ್ರಜ್ಞಾನ ಕಂಪೆನಿಗಳ ಗುಂಪಿಗೆ ಸೇರುತ್ತಿದೆ.

ಸುದ್ದಿಸಂಸ್ಥೆಯ ಪ್ರಕಾರ, ತನ್ನ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು, ಉತ್ಪನ್ನಗಳ ಅಭಿವೃದ್ಧಿಗೆ ವೇಗ ನೀಡಲು, ಗ್ರಾಹಕರಿಗೆ ಹೆಚ್ಚಿನ ತೃಪ್ತಿಯನ್ನು ನೀಡಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು AIನ್ನು ಅಳವಡಿಸಿಕೊಳ್ಳಲು ಕಂಪೆನಿಯು ಪ್ರಯತ್ನಿಸುತ್ತಿರುವುದರಿಂದ ವೆಚ್ಚ ಕಡಿತ ಕ್ರಮಗಳಿಗೆ ಮುಂದಾಗಿದೆ.

ಆದಾಗ್ಯೂ ಹೂಡಿಕೆದಾರರು ಈ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿಲ್ಲ. ಕಂಪೆನಿಯ ಪ್ರಕಟಣೆಯ ಬಳಿಕ ವಿಸ್ತೃತ ವಹಿವಾಟಿನಲ್ಲಿ ಅದರ ಶೇರುಗಳು ಶೇ.5.5ರಷ್ಟು ಕುಸಿತವನ್ನು ದಾಖಲಿಸಿವೆ.

ಉದ್ಯೋಗ ಕಡಿತವು ಉತ್ಪನ್ನ ಅಭಿವೃದ್ಧಿ, ಆಂತರಿಕ ಕಾರ್ಯಾಚರಣೆಗಳು ಮತ್ತು ಗ್ರಾಹಕ ಬೆಂಬಲ ವ್ಯವಸ್ಥೆಯಲ್ಲಿ ತೊಡಗಿಕೊಂಡಿರುವ ತಂಡಗಳ ಮೇಲೆ ಪರಿಣಾಮ ಬೀರಲಿದೆ ಎನ್ನುವುದನ್ನು HP ಸಿಇಒ ಎನ್ರಿಕ್ ಲೋರ್ಸ್ ದೃಢಪಡಿಸಿದ್ದಾರೆ. ಈ ಉಪಕ್ರಮದಿಂದ ಮೂರು ವರ್ಷಗಳಲ್ಲಿ ಒಂದು ಶತಕೋಟಿ ಡಾಲರ್ ಉಳಿತಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಲೋರ್ಸ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

HP ಫೆಬ್ರವರಿಯಲ್ಲಿ ತಾನು ಹಿಂದೆ ಘೋಷಿಸಿದ್ದ ಪುನರ್ರಚನೆ ಯೋಜನೆಯ ಭಾಗವಾಗಿ ಹೆಚ್ಚುವರಿ 1,000ದಿಂದ 2,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ವೆಚ್ಚಗಳನ್ನು ಕಡಿತಗೊಳಿಸಲು HP AI ಅನ್ನು ನೆಚ್ಚಿಕೊಂಡಿದ್ದರೂ ಹೆಚ್ಚುತ್ತಿರುವ ಬಿಡಿಭಾಗಗಳ ಬೆಲೆಗಳಿಂದಾಗಿ ಅದು ಹೊಸ ಹಣಕಾಸು ಸವಾಲುಗಳನ್ನು ಎದುರಿಸುತ್ತಿದೆ. AI ಮೂಲಸೌಕರ್ಯಕ್ಕೆ ಹೆಚ್ಚಿನ ಬೇಡಿಕೆಯಿಂದಾಗಿ ಜಾಗತಿಕವಾಗಿ ಮೆಮರಿ ಚಿಪ್‌ ಗಳ ಬೆಲೆಗಳ ಏರಿಕೆಯು HP, ಡೆಲ್ ಮತ್ತು ಏಸರ್‌ನಂತಹ ಪರ್ಸನಲ್ ಕಂಪ್ಯೂಟರ್ ತಯಾರಕರ ಲಾಭಗಳು ಕುಸಿಯಲು ಕಾರಣವಾಗಬಹುದು ಎಂದು ಮಾರ್ಗನ್ ಸ್ಟ್ಯಾನ್ಲಿಯ ವಿಶ್ಲೇಷಕರು ಎಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries