HEALTH TIPS

ಹಣ ಹಂಚಿ ಅಧಿಕಾರ ಉಳಿಸಿಕೊಳ್ಳುವ ಪಕ್ಷಗಳ ಯತ್ನ: BJPಯ ಮನೋಹರ ಜೋಶಿ ಕಳವಳ

 ನವದೆಹಲಿ: 'ಚುನಾವಣೆ ಪೂರ್ವದಲ್ಲಿ ಆಡಳಿತಾರೂಢ ಸರ್ಕಾರ, ಯೋಜನೆ ಹೆಸರಿನಲ್ಲಿ ಹಣ ಹಂಚುವುದನ್ನು ಇಂದು ಜನರು ಪ್ರಶ್ನಿಸುತ್ತಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಎಂದಿಗೂ ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡುವುದಿಲ್ಲ' ಎಂದು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅಭಿಪ್ರಾಯಪಟ್ಟಿದ್ದಾರೆ. 


ಭಾರತ ಚುನಾವಣಾ ಆಯೋಗದ ಮಾಜಿ ಕಾರ್ಯದರ್ಶಿ ಜಿ.ವಿ.ಜಿ. ಕೃಷ್ಣಮೂರ್ತಿ ಅವರ 91ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಭಾಗಿಯಾಗಿ ಮಾತನಾಡಿದ ಅವರು ಇದನ್ನು ಉಲ್ಲೇಖಿಸಿದ್ದಾರೆ.

'ಹಣ ಹಂಚುವುದನ್ನು ಸರ್ಕಾರಗಳು ಜನಕಲ್ಯಾಣ ಯೋಜನೆ ಎಂದೆನ್ನಬಹುದು. ಆದರೆ ಜನರು ಅದನ್ನು ಒಪ್ಪುವುದಿಲ್ಲ. ಮತಗಳ ಖರೀದಿಗೆ ಹಣ ಹಂಚಲಾಗಿದೆ ಎಂದೇ ಜನರು ಹೇಳುತ್ತಿದ್ದಾರೆ. ಅಂದರೆ ಇಲ್ಲಿ ಸಂವಿಧಾನದತ್ತವಾಗಿ ಲಭ್ಯವಾಗಿರುವ ಅಧಿಕಾರವನ್ನು ಹಣ ಹಂಚುವ ಮೂಲಕ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನಗಳನ್ನು ಪಕ್ಷಗಳು ನಡೆಸುತ್ತಿವೆ. ಇದರಲ್ಲಿ ಪಕ್ಷಭೇದವಿಲ್ಲ. ಇಂದಿರಾ ಗಾಂಧಿ ಅವರೂ ಮಾಡಿದ್ದರು, ವಾಜಪೇಯಿ ಅವರೂ ನಡೆಸಿದ್ದರು' ಎಂದಿದ್ದಾರೆ.

ರಾಜ್ಯಗಳ ಪುನರ್‌ ರಚನೆ ಅಗತ್ಯ

'ತಾರತಮ್ಯವನ್ನು ಕೊನೆಗೊಳಿಸಲು ದೇಶದಲ್ಲಿ ರಾಜ್ಯಗಳನ್ನು ಪುನರ್‌ ರಚಿಸಬೇಕು. ಅವುಗಳು ಪ್ರತಿಯೊಂದರಲ್ಲೂ ಸಮಾನತೆ ಹೊಂದಿರಬೇಕು. ಕ್ಷೇತ್ರಗಳ ಗಾತ್ರ, ಅಲ್ಲಿನ ಜನಸಂಖ್ಯೆಯನ್ನೂ ಗಮನದಲ್ಲಿಟ್ಟುಕೊಂಡು ಸಣ್ಣ ರಾಜ್ಯಗಳನ್ನು ರಚಿಸುವ ಅಗತ್ಯವಿದೆ. ಪ್ರತಿಯೊಬ್ಬ ನಾಗರಿಕ ಸಮಾನ ಮತದಾನದ ಹಕ್ಕು ಹೊಂದಿದ್ದಾನೆ. ಆದರೆ ಕರ್ನಾಟಕ, ಬಿಹಾರ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ವಾಸಿಸುವ ಜನರ ನಡುವೆ ಆರ್ಥಿಕ ಸ್ಥಿತಿಯಲ್ಲಿ ಭಾರಿ ವ್ಯತ್ಯಾಸವಿದೆ' ಎಂದರು.

ಆರ್ಥಿಕ ವಿಷಯದಲ್ಲಿ ಕರ್ನಾಟಕ- ಬಿಹಾರ ಒಂದೇ?

'ಕರ್ನಾಟಕದಲ್ಲಿ, ಒಬ್ಬ ವ್ಯಕ್ತಿಯ ಆರ್ಥಿಕ ಬಲ ಏನು? ಅವನು ನಿರ್ದಿಷ್ಟ ಆರ್ಥಿಕ ಬಲದಿಂದ ಮತ ಚಲಾಯಿಸುತ್ತಾನೆ...ಆದರೆ ದೇಶದ ವಿವಿಧ ಭೌಗೋಳಿಕ ಪರಿಸರವಾದ ಮರುಭೂಮಿ, ಗುಡ್ಡಗಾಡು ಅಥವಾ ಈಶಾನ್ಯದ ರಾಜ್ಯಗಳಲ್ಲಿರುವ ವ್ಯಕ್ತಿಯ ಆರ್ಥಿಕ ಪರಿಸ್ಥಿತಿಯೂ ಒಂದೇ ರೀತಿಯಾಗಿದೆಯೇ? ಎಂದು ಪ್ರಶ್ನಿಸಿದರು.

ಸಂವಿಧಾನವು ಆರ್ಥಿಕ ಮತ್ತು ರಾಜಕೀಯ ನ್ಯಾಯದ ಹಕ್ಕನ್ನು ಒದಗಿಸುತ್ತದೆ. ರಾಜಕೀಯ ಹಕ್ಕಿಗಾಗಿ, ಮತದಾನದ ಹಕ್ಕನ್ನು ನೀಡಲಾಗಿದೆ. ಆದರೆ ಒಬ್ಬ ವ್ಯಕ್ತಿಗೆ ಆರ್ಥಿಕ ನ್ಯಾಯ ಸಿಗದ ಹೊರತು ಈ ಮತದಾನದ ಹಕ್ಕನ್ನು ಚಲಾಯಿಸಲು ಸಾಧ್ಯವಿಲ್ಲ. ಅಂಬೇಡ್ಕರ್ ಕೂಡ ಇದರ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾರೆ ಎಂದರು.

ಚುನಾವಣೆ ಸಮಯದಲ್ಲಿ ಹಣ ಹಂಚುವುದರಿಂದ ಕಲ್ಯಾಣವಾಗುವುದಿಲ್ಲ

'ಸಂವಿಧಾನದ ಆಶಯವನ್ನು ಪೂರೈಸಲು ಎಲ್ಲಾ ರಾಜ್ಯಗಳ ಆರ್ಥಿಕ ಸಮಾನತೆ ಮತ್ತು ಸಮಾನ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದಿರುವ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ, ಚುನಾವಣೆ ಪೂರ್ವದಲ್ಲಿ ಹಣ ಹಂಚುವುದರಿಂದ ಕಲ್ಯಾಣವಾಗುವುದಿಲ್ಲ' ಎಂದು ಹೇಳಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries