ಕೋಝಿಕ್ಕೋಡ್ : ಸಂಸತ್ತಿನಲ್ಲಿ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಂ ಪ್ರಾತಿನಿಧ್ಯದ ಕೊರತೆ ಕುರಿತು ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿ ಘಟಕದ ಮುಖ್ಯಸ್ಥ ರಾಜೀವ್ ಚಂದ್ರಶೇಖರ್, "ಮುಸ್ಲಿಮರು ನಮಗೆ ಮತ ಚಲಾಯಿಸುವುದಿಲ್ಲ" ಎಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ.
ಕೋಝಿಕ್ಕೋಡ್ ಪ್ರೆಸ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜೀವ್ ಚಂದ್ರಶೇಖರ್, "ಮುಸ್ಲಿಮರು ಬಿಜೆಪಿಗೆ ಮತ ಚಲಾಯಿಸದೆ ಇರುವುದು ಕೇಂದ್ರ ಸಚಿವ ಸಂಪುಟದಲ್ಲಿ ಅವರ ಪ್ರಾತಿನಿಧ್ಯ ಇಲ್ಲದಿರಲು ಪ್ರಮುಖ ಕಾರಣ" ಎಂದು ಸ್ಪಷ್ಟಪಡಿಸಿದ್ದಾರೆ.
"ಅವರು ಬಿಜೆಪಿಗೆ ಮತ ಚಲಾಯಿಸಿದರೆ ಮಾತ್ರ ಮುಸ್ಲಿಂ ಸಂಸದರಿರಲು ಸಾಧ್ಯ. ಮುಸ್ಲಿಂ ಸಂಸದರೇ ಇಲ್ಲವೆಂದ ಮೇಲೆ ಮುಸ್ಲಿಂ ಸಚಿವರು ಹೇಗಿರಲು ಸಾಧ್ಯ? ಕಾಂಗ್ರೆಸ್ ಪಕ್ಷಕ್ಕೆ ನಿರಂತರವಾಗಿ ಮತ ಚಲಾಯಿಸುವ ಮೂಲಕ, ಮುಸ್ಲಿಂ ಸಮುದಾಯ ಯಾವ ಪ್ರಯೋಜನಗಳನ್ನು ಪಡೆದಿದೆ? ಕಾಂಗ್ರೆಸ್ ಗೆ ಮತ ಚಲಾಯಿಸುವ ಮೂಲಕ ಮುಸ್ಲಿಮರು ಏನು ಸಾಧಿಸಿದ್ದಾರೆ. ಅವರು ಬಿಜೆಪಿಗೆ ಮತ ಚಲಾಯಿಸಲು ಬಯಸದಿದ್ದಾಗ ಅವರೇಗೆ ಪ್ರಾತಿನಿಧ್ಯವನ್ನು ನಿರೀಕ್ಷಿಸಲು ಸಾಧ್ಯ?" ಎಂದು ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.




