ನವದೆಹಲಿ: ಕೆಂಪು ಕೋಟೆ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಡಾ. ಮೊಹಮ್ಮದ್ ಆರಿಫ್, ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ವ್ಯಾಸಂಗ ನಡೆಸಿರುವುದಾಗಿ ತಿಳಿದುಬಂದಿದೆ.
ಜಮ್ಮುವಿನ ಅನಂತನಾಗ್ ಮೂಲದ ಆರಿಫ್, ಸ್ನಾತಕೋತ್ತರ ಕೋರ್ಸ್‌ಗಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬರೆದ ನಂತರ ತಿರುವನಂತಪುರದಲ್ಲಿ ಎಂಸಿಎಚ್‌ಗೆ ಪ್ರವೇಶ ಪಡೆದ.ಭಯೋತ್ಪಾದನಾ ನಿಗ್ರಹ ದಳವು ಆತನನ್ನು ಬಂಧಿಸಿದಾಗ, ಆರಿಫ್ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಾದ ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ (ಜಿಎಸ್‌ವಿಎಂ) ನ ಹೃದ್ರೋಗ ವಿಭಾಗದಲ್ಲಿ ಹಿರಿಯ ರೆಸಿಡೆನ್ಸ್ ವೈದ್ಯನಾಗಿದ್ದ.
ನವೆಂಬರ್ 9 ರಂದು ಸ್ಫೋಟದಲ್ಲಿ ಬಂಧಿತನಾದ ಡಾ. ಶಾಹೀನ್ ಸಯೀದ್ ನ ಫೋನ್ ದಾಖಲೆಗಳನ್ನು ಪರಿಶೀಲಿಸಿದಾಗ ಆರಿಫ್ ಹೆಸರು ಬೆಳಕಿಗೆ ಬಂದಿತು. ಇಬ್ಬರೂ ಹಲವಾರು ತಿಂಗಳುಗಳಿಂದ ನಿಯಮಿತವಾಗಿ ಸಂಪರ್ಕದಲ್ಲಿದ್ದರು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಕಾನ್ಪುರದ ಅಶೋಕ್ ನಗರ ಪ್ರದೇಶದ ಬಾಡಿಗೆ ಫ್ಲಾಟ್‌ನಿಂದ ಆರಫ್ ನ್ನು ಬಂಧಿಸಲಾಯಿತು. ಆತನ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಪರಿಶೀಲಿಸಲಾಗುತ್ತಿದೆ, ಆತನಿಗೆ ಭಯೋತ್ಪಾದಕರ ಸಂಪರ್ಕವಿದೆ ಎಂದು ದೃಢಪಡಿಸಿಕೊಳ್ಳಲಾಗುತ್ತಿದೆ.
ಆರಿಫ್ ಎಂಬಿಬಿಎಸ್ ಮತ್ತು ಎಂಡಿ ಮುಗಿಸಿದ ನಂತರ ಜಿಎಸ್‌ವಿಎಂ ಸೇರಿದ್ದ ಎಂದು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಉಮೇಶ್ವರ ಪಾಂಡೆ ತಿಳಿಸಿದ್ದಾರೆ. ಆರಿಫ್ ಕಳೆದ ನಾಲ್ಕು ತಿಂಗಳಿನಿಂದ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯಲ್ಲಿ ಉನ್ನತ ತರಬೇತಿ ಪಡೆಯುತ್ತಿದ್ದ. ಕಾಲೇಜಿನಲ್ಲಿ ಹಾಸ್ಟೆಲ್ ಸೌಲಭ್ಯವಿಲ್ಲದ ಕಾರಣ ಕ್ಯಾಂಪಸ್‌ನ ಹೊರಗೆ ವಾಸಿಸುತ್ತಿದ್ದ. ಡಾ. ಶಾಹೀನ್ ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನಲ್ಲಿ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ ಎಂದು ತನಿಖಾ ತಂಡ ಹೇಳಿದೆ.




