ನವದೆಹಲಿ: ನಿನ್ನೆ ರಾಷ್ಟ್ರ ರಾಜಧಾನಿ ದೆಹಲಿಯ (Delhi) ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡು ದುರಂತದಲ್ಲಿ 13 ಜನರ ಸಾವಾಗಿದೆ.ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೆಲ್ಲದರ ನಡುವೆ 12ನೇ ತರಗತಿಯ ವಿದ್ಯಾರ್ಥಿಯೊಬ್ಬನ ರೆಡ್ಡಿಟ್ ಪೋಸ್ಟ್ ಭಾರೀ ವೈರಲ್ ಆಗುತ್ತಿದ್ದು, ಇದು ಸ್ಫೋಟದ ಬಗ್ಗೆ ಭದ್ರತಾ ಅಧಿಕಾರಿಗಳಿಗೆ ಮೊದಲೇ ಸುಳಿವು ಸಿಕ್ಕಿತ್ತಾ ಎಂಬ ಪ್ರಶ್ನೆಗೆ ಕಾರಣವಾಗಿದೆ.
ಹೌದು, ಕೆಂಪು ಕೋಟೆಯ ಬಳಿ ಸ್ಫೋಟ ಸಂಭವಿಸುವುದಕ್ಕೂ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮ ಬಳಕೆದಾರ ವಿದ್ಯಾರ್ಥಿಯೊಬ್ಬ 'ದೆಹಲಿಯಲ್ಲಿ ಏನಾದರೂ ನಡೆಯುತ್ತಿದೆಯೇ?' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದ.
ಅದರಲ್ಲಿ ಬರೆದಿದ್ದ ಆತ, ನಾನು ಈಗಷ್ಟೇ ಶಾಲೆಯಿಂದ ಮನೆಗೆ ತಲುಪಿದೆ. ಆದರೆ ಶಾಲೆಯಿಂದ ಮನೆಗೆ ಬರುವ ದಾರಿಯುದ್ದಕ್ಕೂ ಅದರಲ್ಲೂ ಹೆಚ್ಚಾಗಿ ಕೆಂಪು ಕೋಟೆಯ ಬಳಿ ಪೊಲೀಸರು, ಭದ್ರತಾ ಪಡೆಗಳು ಹಾಗೂ ಮಾಧ್ಯಮದವರೇ ತುಂಬಿದ್ದರು. ಮಾತ್ರವಲ್ಲದೇ ನಾನು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗಲೂ ಎಂದಿಗಿಂತ ಅಸಾಮಾನ್ಯವೆಂಬಂತೆ ಸೈನಿಕರೇ ಹೆಚ್ಚು ಜನರಿದ್ದರು. ಇವತ್ತು ನಗರದಲ್ಲಿ ಏನಾದರೂ ಆಗಿತ್ತೇ? ಎಂದು ಇತರ ಬಳಕೆದಾರರಿಗೆ ಕೇಳುವಂತೆ ಆತ ಪೋಸ್ಟ್‌ನಲ್ಲಿ ಬರೆದಿದ್ದ.
ವರದಿಗಳ ಪ್ರಕಾರ ವಿದ್ಯಾರ್ಥಿ ತನ್ನನ್ನು 12ನೇ ತರಗತಿ ವ್ಯಾಸಂಗ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ರೆಡ್ಡಿಟ್‌ನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಆದರೆ ಸ್ಫೋಟ ಸಂಭವಿಸಿರುವುದು ಸಂಜೆ 7 ಗಂಟೆಗೆ. ಸ್ಫೋಟ ಸಂಭವಿಸುವುದಕ್ಕೂ ಕೆಲವೇ ಗಂಟೆ ಮೊದಲು. ಗಮನಾರ್ಹ ವಿಚಾರವೆಂದರೆ ಐ20 ಕಾರು ಸ್ಫೋಟಗೊಂಡ ದೆಹಲಿಯ ಕೆಂಪು ಕೋಟೆಯನ್ನು ಕೂಡಾ ಆತ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದ.
ಈ ಪೋಸ್ಟ್ ಅನ್ನು ಕಂಡು ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಸ್ಫೋಟ ಸಂಭವಿಸುತ್ತಲೇ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಆದರೆ ಸ್ಫೋಟ ಸಂಭವಿಸುವುದಕ್ಕೂ ಮೊದಲೇ ಗುಪ್ತಚರ ಮಾಹಿತಿ ಲಭಿಸಿತ್ತೇ? ಈ ಹಿನ್ನೆಲೆ ನಗರದಾದ್ಯಂತ ಪೊಲೀಸರು ಹಾಗೂ ಭದ್ರತಾ ಅಧಿಕಾರಿಗಳು ಮೊದಲೇ ಕಟ್ಟೆಚ್ಚರ ವಹಿಸಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಭದ್ರತಾ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಸಿಗದೇ ಹೋಗಿ, ಸ್ಫೋಟಕ್ಕೂ ಮೊದಲು ಸಾಮಾನ್ಯದಂತೆಯೇ ಕಾರ್ಯನಿರ್ವಹಿಸುತ್ತಿದ್ದರೆ ಬಳಕೆದಾರ ಈ ರೀತಿ ಪೋಸ್ಟ್ ಮಾಡಲು ಕಾರಣ ಏನು? ಆತನಿಗೆ ದುರಂತದ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿತ್ತೇ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ.




