ಹೊಸ ಸರ್ಕಾರದಲ್ಲಿ ಬಿಜೆಪಿ ಕೋಟಾದಿಂದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ಮತ್ತೊಮ್ಮೆ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಸಚಿವ ಸ್ಥಾನ ಹಂಚಿಕೆ ಸಂಬಂಧ ಅಂತಿಮ ನಿರ್ಧಾರ ಪ್ರಕಟವಾಗಿದ್ದು, ವಿವಿಧ ಮೈತ್ರಿ ಪಕ್ಷಗಳಿಂದಲೂ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ನಿತೀಶ್ ಕುಮಾರ್ ಅವರ ಸಂಪುಟದ ಭಾಗವಾಗಿ ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿಯೂ ಬಿಡುಗಡೆಯಾಗಿದೆ. ಬಿಜೆಪಿ - 14 ಸಚಿವರು, ಜೆಡಿಯು - 7 ಸಚಿವರು, ಹಿಂದೂಸ್ತಾನಿ ಅವಾಮ್ ಮೋರ್ಚಾ - 1, ರಾಷ್ಟ್ರೀಯ ಲೋಕ ಮೋರ್ಚಾ - ಒಬ್ಬ ಸಚಿವರನ್ನು ಹೊಂದಿದೆ.
ಹೆಚ್ಚಾಗಿ ಗಮನ ಸೆಳೆದಿರುವ ವಿಷಯವೆಂದರೆ, ಜಿತನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್, ಉಪೇಂದ್ರ ಕುಶ್ವಾಹ ಅವರ ಪುತ್ರ ದೀಪಕ್ ಪ್ರಕಾಶ್ ತಮ್ಮ ತಮ್ಮ ಪಕ್ಷದ ಪ್ರತಿನಿಧಿಗಳಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ ಒಟ್ಟು 202 ಸ್ಥಾನಗಳನ್ನು ಗಳಿಸಿದ್ದು, ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದೆ. ಬಿಜೆಪಿ - 89 ಸ್ಥಾನಗಳು, ಜೆಡಿಯು - 85, LJP - 19 ಸ್ಥಾನಗಳು, HAM - 5, RLM - 4 ಸ್ಥಾನಗಳನ್ನ ಗಳಿಸಿತು. ಮೈತ್ರಿ ಪಕ್ಷಗಳ ಶಾಸಕರು ನಿತೀಶ್ ಕುಮಾರ್ ಅವರನ್ನು ಏಕಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಿ, ಸರ್ಕಾರ ರಚನೆಗೆ ಅಗತ್ಯವಾದ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ್ದಾರೆ.
2000 ರಲ್ಲಿ ಮೊದಲಬಾರಿಗೆ ಬಿಹಾರದ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್, 2005ರಲ್ಲಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದರು. ಸತತ ಎಂಟು ವರ್ಷಗಳಿಗಿಂತ ಹೆಚ್ಚು ಅವಧಿಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2014ರ ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿ ಜೊತೆಗೂಡಿದ್ದ ಮೈತ್ರಿ ಮುರಿಯಲಾಗಿತ್ತು.
ಬಳಿಕ ಜೆಡಿಯು ಸೋಲಿನ ಹೊಣೆ ಹೊತ್ತು ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದರು. ನಂತರ ಜಿತನ್ ರಾಮ್ ಮಾಂಝಿ ಅವರನ್ನು ಅಲ್ಪಾವಧಿಗೆ ಮುಖ್ಯಮಂತ್ರಿ ಮಾಡಲಾಗಿತ್ತು. ಇದೇ ವೇಳೆ, 2025ರ ಹೊಸ ಸರ್ಕಾರವೂ ಮತ್ತೆ ನಿತೀಶ್ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದೆ.




