ಜೈಪುರ : ರಾಜ್ಯದ ಜಲಸಂಪನ್ಮೂಲ ಸಚಿವ ಸುರೇಶ್ ಸಿಂಗ್ ರಾವತ್ ಅವರ ಅಧಿಕೃತ ಬಂಗಲೆಗೆ ಚಿರತೆಯೊಂದು ಪ್ರವೇಶಿಸಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ 8:30ರ ಸುಮಾರಿಗೆ ಈ ಘಟನೆ ನಡೆದಿದೆ. ಜೈಪುರದ ಹೈ ಸೆಕ್ಯುರಿಟಿ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಶಾಲೆ, ಸಚಿವರ ಬಂಗಲೆ ಸೇರಿದಂತೆ ವಸತಿ ಪ್ರದೇಶದ ಆವರಣದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸಿಬ್ಬಂದಿ ನೋಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಚಿರತೆ ಬಂಗಲೆ ಪ್ರವೇಶೀಸಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲು ಟೈನಿ ಬ್ಲಾಸಮ್ ಸೀನಿಯರ್ ಸೆಕೆಂಡರಿ ಶಾಲೆಗೆ ಪ್ರವೇಶಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿ ವಿದ್ಯಾರ್ಥಿಗಳಿರುವ ಕೊಠಡಿಗಳಿಗೆ ಬೀಗ ಹಾಕಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಚಿರತೆ ರಾವತ್ ಅವರ ಬಂಗಲೆಗೆ ಪ್ರವೇಶಿಸಿದೆ ಎಂದು ವರದಿಯಾಗಿದೆ. ಅವರ ಬಂಗಲೆ ಕಾಂಗ್ರೆಸ್ ಹಿರಿಯ ನಾಯಕ ಸಚಿನ್ ಪೈಲಟ್ ಅವರ ನಿವಾಸದ ಎದುರು ಇದೆ.
ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಸಚಿವ ರಾವತ್ ಬಂಗಲೆ ಮತ್ತು ಅಕ್ಕಪಕ್ಕದ ನಿವಾಸಗಳನ್ನು ಶೋಧಿಸುತ್ತಿವೆ. ಚಿರತೆಯನ್ನು ಶಾಂತಗೊಳಿಸಲು ಮತ್ತು ಸುರಕ್ಷಿತವಾಗಿ ಸೆರೆಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅರಣ್ಯಾಧಿಕಾರಿ ಜಿತೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಚಿರತೆ ನಿರಂತರವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಾಡುತ್ತಿದೆ. ಆದ್ದರಿಂದ, ಅದನ್ನು ಶಾಂತಗೊಳಿಸುವುದು ಕಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಅದರ ಚಲನವಲನಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ. ಜನರು ಮನೆಯೊಳಗೆ ಇರಬೇಕು. ಸ್ಥಳದಲ್ಲಿರುವ ಮಾಧ್ಯಮ ಸಿಬ್ಬಂದಿ ಮತ್ತು ಸ್ಥಳೀಯರು ಕೂಡ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಸಿವಿಲ್ ಲೈನ್ಸ್ ಪ್ರದೇಶವು ರಾಜಭವನ, ಮುಖ್ಯಮಂತ್ರಿ ನಿವಾಸ, ಸಚಿವರು ಮತ್ತು ಉನ್ನತ ಅಧಿಕಾರಿಗಳ ಅಧಿಕೃತ ನಿವಾಸಗಳನ್ನು ಹೊಂದಿದೆ.

