ತಾನು ಅದಾಗಲೇ ಅಗ್ರ ಬಿಡ್ಡರ್ ಆಗಿ ಹೊರಹೊಮ್ಮಿದ ಬಳಿಕ ಟೆಂಡರ್‌ನ ನಿಯಮಗಳನ್ನು ಬದಲಿಸಲಾಗಿದೆ ಮತ್ತು ಯೋಜನೆಯನ್ನು ಅದಾನಿ ಗ್ರೂಪ್‌ಗೆ ನೀಡಲಾಗಿದೆ ಎಂದು ಅದು ಆರೋಪಿಸಿದೆ ಎಂದು ಸುದ್ದಿಸಂಸ್ಥೆ ʼಖಲೀಜ್ ಟೈಮ್ಸ್ʼ ವರದಿ ಮಾಡಿದೆ.
ಮುಂಬೈನ ಹೃದಯಭಾಗದಲ್ಲಿ ಸುಮಾರು 2.4 ಚದುರ ಕಿ.ಮೀ.ಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿರುವ ಧಾರಾವಿ 10 ಲಕ್ಷಕ್ಕೂ ಹೆಚ್ಚು ಜನರಿಗೆ ಆವಾಸ ಸ್ಥಾನವಾಗಿದ್ದು, ವಿಶ್ವದ ಅತ್ಯಂತ ಜನನಿಬಿಡ ಅನೌಪಚಾರಿಕ ವಸಾಹತು ಆಗಿದೆ. ಆಸ್ಕರ್ ಪ್ರಶಸ್ತಿ ವಿಜೇತ 'ಸ್ಲಮ್ ಡಾಗ್ ಮಿಲಿಯನೇರ್'ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಇದು ಜಾಗತಿಕ ಖ್ಯಾತಿಯನ್ನು ಪಡೆದಿದೆ.
ದೀರ್ಘಾವಧಿಯಲ್ಲಿ 125 ಶತಕೋಟಿ ದಿರ್‌ಹಮ್(ಸುಮಾರು 2.8 ಲಕ್ಷ ಕೋಟಿ ರೂ.) ವಾಣಿಜ್ಯ ಮೌಲ್ಯವನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿರುವ ಈ ಪುನರಾಭಿವೃದ್ಧಿಯು ಏಷ್ಯಾದಲ್ಲಿ ಅತ್ಯಂತ ನಿಕಟ ನಿಗಾಕ್ಕೊಳಪಟ್ಟಿರುವ ನಗರ ರೂಪಾಂತರ ಯೋಜನೆಗಳಲ್ಲೊಂದಾಗಿದೆ.
ದುಬೈನಲ್ಲಿ ನೋಂದಾಯಿತ ಎಸ್‌ಟಿಸಿ ಈ ವಿವಾದದ ಕೇಂದ್ರ ಬಿಂದುವಾಗಿದ್ದು, 2018ರಲ್ಲಿ ಮಹಾರಾಷ್ಟ್ರ ಸರಕಾರವು ಧಾರಾವಿ ಪುನರಾಭಿವೃದ್ಧಿ ಯೋಜನೆಗಾಗಿ ಕರೆಯಲಾಗಿದ್ದ ಅಂತರರಾಷ್ಟ್ರೀಯ ಟೆಂಡರ್‌ನಲ್ಲಿ ಭಾಗವಹಿಸಿತ್ತು. ಅದನ್ನು ಅತ್ಯಂತ ಕಡಿಮೆ ಬಿಡ್ ಸಲ್ಲಿಸಿದ ಕಂಪನಿ ಎಂದು 2019ರಲ್ಲಿ ಘೋಷಿಸಲಾಗಿತ್ತು.
ತಾನು ಆಯ್ಕೆಯಾದ ಬಳಿಕ ಔಪಚಾರಿಕ ಒಪ್ಪಂದಕ್ಕಾಗಿ ಕಾಯುತ್ತಿದ್ದಾಗ ಟೆಂಡರ್ ಅನ್ನು ರದ್ದುಗೊಳಿಸಲಾಗಿತ್ತು ಮತ್ತು ತಾನು ಮತ್ತೊಮ್ಮೆ ಭಾಗವಹಿಸುವುದನ್ನು ತಡೆಯಲು ಹೊಸ ನಿಯಮಗಳನ್ನು ತರಲಾಗಿತ್ತು ಎಂದು ಎಸ್‌ಟಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಪಾದಿಸಿದೆ.
2020ರ ಉತ್ತರಾರ್ಧದಲ್ಲಿ ಪಕ್ಕದ ರೈಲ್ವೆ ಭೂಮಿಯನ್ನು ಯೋಜನೆಯಲ್ಲಿ ಸೇರಿಸುವ ಅಗತ್ಯವನ್ನು ಉಲ್ಲೇಖಿಸಿ ಸರಕಾರವು ಟೆಂಡರ್‌ನ್ನು ರದ್ದುಗೊಳಿಸಿತ್ತು. ಆದರೆ ಅಂತಹ ಯಾವುದೇ ಭೂಮಿಯನ್ನು ಅದು ಸ್ವಾಧೀನ ಪಡಿಸಿಕೊಂಡಿರಲಿಲ್ಲ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.
2022ರಲ್ಲಿ ಪರಿಷ್ಕೃತ ಅರ್ಹತಾ ಮಾನದಂಡಗಳು ಮತ್ತು ಹಣಕಾಸು ನಿಬಂಧನೆಗಳೊಂದಿಗೆ ಧಾರಾವಿ ಪುನರಾಭಿವೃದ್ಧಿಗಾಗಿ ಹೊಸದಾಗಿ ಟೆಂಡರ್ ಕರೆಯಲಾಗಿತ್ತು ಮತ್ತು ಕಡಿಮೆ ಬಿಡ್ ಸಲ್ಲಿಸಿದ್ದ ಅದಾನಿ ಗ್ರೂಪ್‌ಗೆ ಯೋಜನೆಯ ಹೊಣೆಯನ್ನು ವಹಿಸಲಾಗಿತ್ತು.
2023-24ರಲ್ಲಿ ಎಸ್‌ಟಿಸಿ ತನ್ನ ಬಿಡ್ ಅನ್ನು ರದ್ದುಗೊಳಿಸಿದ್ದನ್ನು ಮತ್ತು ಹೊಸದಾಗಿ ಟೆಂಡರ್ ಕರೆದಿದ್ದನ್ನು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಅದೇ ವರ್ಷ ಉಚ್ಚ ನ್ಯಾಯಾಲಯವು ಅದಾನಿ ಗ್ರೂಪ್‌ಗೆ ಟೆಂಡರ್ ನೀಡಿದ್ದನ್ನು ಪ್ರಶ್ನಿಸಿದ್ದ ಎಸ್‌ಟಿಸಿಯ ಅರ್ಜಿಯನ್ನು ವಜಾಗೊಳಿಸಿತ್ತು.
ಇದರ ವಿರುದ್ಧ ಎಸ್‌ಟಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು.
ಮರುಟೆಂಡರ್ ಪ್ರಕ್ರಿಯೆಯನ್ನು ಪರಿಶೀಲಿಸಲು ಮಾರ್ಚ್ 2025ರಲ್ಲಿ ಒಪ್ಪಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಹೆಚ್ಚು ಪರಿಷ್ಕೃತ ಬಿಡ್ ಸಲ್ಲಿಸಲು ಮತ್ತು ಎಲ್ಲ ಹೊಸ ಬಾಧ್ಯತೆಗಳಿಗೆ ಹೊಂದಿಕೊಳ್ಳಲು ಎಸ್‌ಟಿಸಿ ಸಿದ್ಧವಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತ್ತು. ಇದೇ ವೇಳೆ ಮೂಲ ಕಡತಗಳನ್ನು ಪರಿಶೀಲನೆಗೆ ಸಲ್ಲಿಸುವಂತೆ ಆದೇಶಿಸಿದ್ದ ನ್ಯಾಯಾಲಯವು ಎಲ್ಲ ಯೋಜನಾ ಪಾವತಿಗಳನ್ನು ಏಕ ಮೇಲ್ವಿಚಾರಣೆ ಖಾತೆಯ ಮೂಲಕ ರವಾನಿಸುವಂತೆ ನಿರ್ದೇಶನ ನೀಡಿತ್ತು.
ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನ.13ಕ್ಕೆ ನಿಗದಿಗೊಳಿಸಿದ್ದು,ಅಂದು ಸರಕಾರವು ದಾಖಲೆಗಳನ್ನು ಸಲ್ಲಿಸುವ ನಿರೀಕ್ಷೆಯಿದೆ ಮತ್ತು ಎಸ್‌ಟಿಸಿ ತನ್ನ ವಾದಗಳನ್ನು ಪುನರಾರಂಭಿಸಲಿದೆ.
ʼಖಲೀಜ್ ಟೈಮ್ಸ್ʼ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಸ್‌ಟಿಸಿಯ ಸಿಎಂಡಿ ನೀಲಾಂಗ ಶಾ ಅವರು, ಟೆಂಡರ್ ರದ್ದುಗೊಳಿಸುವ ಮುನ್ನ ಅದಾಗಲೇ ಕಂಪನಿಯು ಹಣಕಾಸು ವ್ಯವಸ್ಥೆಯನ್ನು ಮಾಡಿಕೊಂಡಿತ್ತು. ಯೋಜನೆಗೆ ಬ್ಯಾಂಕ್ ಗ್ಯಾರಂಟಿಯಾಗಿ ನಾಲ್ಕು ಶತಕೋಟಿ ಡಾಲರ್(13.5 ಶತಕೋಟಿ ದಿರ್‌ಹಮ್)ಗಳನ್ನು ನಾವು ಮೀಸಲಿರಿಸಿದ್ದೇವೆ. ಈಗ ವೆಚ್ಚವು 3.82 ಶತಕೋಟಿ ದಿರ್‌ಹಮ್‌ನ್ನು ದಾಟಿದ್ದು,ವಿವಾದವು ಬಗೆಹರಿಯುವವರೆಗೆ ಹಣಕಾಸು ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ವೆಚ್ಚ ಏರುತ್ತಲೇ ಇರಲಿದೆ ಎಂದು ಹೇಳಿದರು.




