ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದಲ್ಲಿ ಮಂಡಲ-ಮಕರ ಜ್ಯೋತಿ ಮಾಸಾಚರಣೆಗಾಗಿ ಗರ್ಭಗುಡಿ ಬಾಗಿಲು ತೆರೆದ ಎರಡನೇ ದಿನವಾದ ಮಂಗಳವಾರ ಭಾರೀ ಸಂಖ್ಯೆಯಲ್ಲಿ ವ್ರತಧಾರಿಗಳು ಬಂದು ಸೇರಿದ್ದರು. ಬಹುತೇಕ ಮಂದಿ ಭಕ್ತಾದಿಗಳು ಸರತಿಸಾಲು ಬಿಟ್ಟು, ಧಾವಿಸುತ್ತಿದ್ದ ಹಿನ್ನೆಲೆಯಲ್ಲಿ ಸಾಲಲ್ಲಿ ನಿಂತವರು ಹೆಚ್ಚಿನ ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು. ಸರತಿ ಸಾಲಲ್ಲಿ ಹೆಚ್ಚಿನ ಸಮಯ ನಿಲ್ಲಬೇಕಾಗಿ ಬರುತ್ತಿರುವುದರಿಂದ ಕೆಲವು ಭಕ್ತಾದಿಗಳು ಸರತಿಸಾಲು ಬಿಟ್ಟು, ಧಾವಿಸುತ್ತಿರುವುದು ಕಂಡುಬಂದಿದೆ.
ಕೆಲವು ಮಂದಿ ಭಕ್ತಾದಿಗಳು ಭಕ್ತರ ಸಂದಣಿ ಕಂಡು ದೇವರ ದರ್ಶನಕ್ಕೆ ಕಾಯದೆ, ಪಂದಳದಲ್ಲಿ ತುಪ್ಪಾಭಿಷೇಕ ನಡೆಸಿ, ವಾಪಸಾಗಿರುವ ಬಗ್ಗೆಯೂ ಮಾಹಿತಿಯಿದೆ. ಈಗಾಗಲೇ ವಚ್ರ್ಯುವಲ್ ಕ್ಯೂ ಮೂಲಕ ದಿನವೊಂದಕ್ಕೆ 70ಸಾವಿರ ಮಂದಿ ಹಾಗೂ ಸ್ಪಾಟ್ ಬುಕ್ಕಿಂಗ್ ಮೂಲಕ 20ಸಾವಿರ ಮಂದಿಗೆ ದರ್ಶನ ಅವಕಾಶ ಕಲ್ಪಿಸಲಾಗಿದ್ದು, ಈ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ದೇವಸ್ವಂ ಬೋರ್ಡ್ ಅಧ್ಯಕ್ಷ ಕೆ.ಜಯಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ.
ಪಂಪೆಗೆ ತಲುಪಿದ ನಂತರ ಭಕ್ತಾದಿಗಳನ್ನು ಎಲ್ಲಿಯೂ ಹೆಚ್ಚಿನ ಸಮಯ ನಿಲ್ಲದಂತೆ ನೋಡಿಕೊಂಡು ಮುಂದುವರಿಯಲು ಅವಕಾಶ ಮಾಡಿಕೊಡುವಂತೆ ಬೋರ್ಡ್ ಅಧ್ಯಕ್ಷ ಕೆ. ಜಯಕುಮಾರ್ ಅವರು ಭದ್ರತಾ ಅಧಿಕಾರಿ ಶ್ರೀಜಿತ್ ಅವರಿಗೆ ಸೂಚಿಸಿದ್ದಾರೆ. ಶಬರಿಮಲೆಯಲ್ಲಿ ಕ್ಯೂ ಕಾಂಪ್ಲೆಕ್ಸ್ ಸ್ಥಾಪಿಸಲು ತೀರ್ಮಾನಿಸಿದ್ದರೂ, ಯೋಜನೆ ಜಾರಿಯಾಗದಿರುವುದರಿಂದ ಸಮಸ್ಯೆ ಎದುರಾಗಿದೆ. ಕ್ಯೂ ಕಾಂಪ್ಲೆಕ್ಸ್‍ನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ, ಈಮೂಲಕ ಭಕ್ತಾದಿಗಳನ್ನು ಕಳುಹಿಸಿಕೊಡಲು ಯೋಜನೆಯಿರಿಸಿಕೊಳ್ಳಲಾಗಿದೆ.
ನೀಲಕ್ಕಲ್‍ನಲ್ಲಿ ಮಂಗಳವಾರ ಏಳು ಸ್ಪಾಟ್ ಬುಕ್ಕಿಂಗ್ ಕೇಂದ್ರಗಳನ್ನು ತೆರೆಯಲಾಗಿದ್ದು, ಪಂಪೆಯಲ್ಲಿ ಈ ಸಂಖ್ಯೆ ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಭಕ್ತಾದಿಗಳಿಗೆ ಶುದ್ಧ ನೀರು ಪೂರೈಕೆ ಸೇರಿದಂತೆ ಕೆಲವೊಂದು ಮೂಲಸೌಕರ್ಯ ಲಭ್ಯವಾಗುತ್ತಿಲ್ಲ ಎಂಬ ದೂರು ವ್ಯಾಪಕಗೊಂಡಿದೆ. ಭಕ್ತಾದಿಗಳಿಗೆ ಎಂಟರಿಂದ ಹತ್ತು ತಾಸುಗಳ ಕಾಳ ಸರತಿ ಸಾಲಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಸರತಿ ಸಾಲಲ್ಲಿ ನಿಲ್ಲುವವರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಮಂಗಳವಾರ 200ಮಂದಿಯನ್ನು ಮತ್ತೆ ನಿಯೋಜಿಸಲಾಗಿದ್ದು, ಶೌಚಗೃಹ ಶುಚೀಕರಣಕ್ಕಾಗಿ ತಮಿಳ್ನಾಡಿನಿಂದ 200ಮಂದಿಯನ್ನು ಕರೆಸಿಕೊಳ್ಳಲಾಗಿದೆ.
ಆನ್‍ಲೈನ್ ಬುಕ್ಕಿಂಗ್ ಮೊದಲ ದಿನವೇ ಪೂರ್ಣಗೊಂಡಿದ್ದು, ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆ ಮುಂದುವರಿದಿದೆ. ಪ್ರತಿ ನಿಮಿಷಕ್ಕೆ 80ರಿಂದ 90ಮಂದಿ ಭಕ್ತಾದಿಗಳನ್ನು ಹದಿನೆಂಟು ಮೆಟ್ಟಿಲೇರಿಸಿಬಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಭಕ್ತಾದಿಗಳ ನಿಯಂತ್ರಣಕ್ಕಾಗಿ ಕೇಂದ್ರೀಯ ಮೀಸಲು ಪಡೆ ಆಗಮಿಸಲಿದೆ. ಈ ಮಧ್ಯೆ ಪಂಪಾ ನದಿ ಮಲಿನಗೊಂಡಿರುವುದಾಗಿ ಸ್ಪೆಶ್ಯಲ್ ಬ್ರಾಂಚ್ ವರದಿ ನೀಡಿದ್ದು, ಇದನ್ನು ಶುಚಿಗೊಳಿಸುವ ಕಾರ್ಯವೂ ನಡೆದುಬರುತ್ತಿರುವುದಾಗಿ ಕೆ. ಜಯಕುಮಾರ್ ತಿಳಿಸಿದ್ದಾರೆ.
ಇತರ ರಾಜ್ಯಗಳ ವ್ರತಧಾರಿಗಳು ಶಬರಿಮಲೆಯಲ್ಲಿನ ಅಸೌಕರ್ಯಗಳ ಬಗ್ಗೆ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ದಿನ ಗರಿಷ್ಠ ಒಂದು ಲಕ್ಷ ಮಂದಿ ಭಕ್ತಾದಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶವಿದ್ದು, ಶಬರಿಮಲೆಗೆ ಆಗಮಿಸುತ್ತಿರುವ ಭಕ್ತಾದಿಗಳ ಸಂಖ್ಯೆ ಅನಿಯಂತ್ರಿತವಾಗಿ ಮುಂದುವರಿಯುತ್ತಿರುವುದು ಆತಂಕಕ್ಕೂ ಕಾರಣವಾಗಿದೆ. ಡಿ. 27ರಂದು ಮಂಡಲ ಪೂಜೆ ನಡೆಯಲಿದ್ದು, ಅಂದು ರಆತ್ರಿ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು.






